ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 7 ಲಕ್ಷ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೈಲ್ವೆ ಇಲಾಖೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಮಹತ್ವದ ಒಡಂಬಡಿಕೆಗೆ ಸಹಿ ಹಾಕಿವೆ. ಇದರ ಅನ್ವಯ ರೈಲ್ವೆ ಇಲಾಖೆ ನೌಕರರಿಗೆ 1.6 ಕೋಟಿ ರೂಪಾಯಿ ಮೌಲ್ಯದ ಅಪಘಾತ ವಿಮೆ ಸುರಕ್ಷತೆ ಸಿಗಲಿದೆ.
ಹೌದು, ರೈಲ್ವೆ ಇಲಾಖೆ ನೌಕರರು ವಿಮಾನ ಅಪಘಾತದಲ್ಲಿ ಮೃತಪಟ್ಟರೆ, 1.6 ಕೋಟಿ ರೂಪಾಯಿ ಮೌಲ್ಯದ ವಿಮಾ ಸುರಕ್ಷತೆ ಸಿಗಲಿದೆ. ಮೃತ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡಲಾಗುತ್ತದೆ. ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ 1 ಕೋಟಿ ರೂಪಾಯಿ ಕವರೇಜ್ ಸಿಗಲಿದೆ. ಅಪಘಾತದಲ್ಲಿ ಶಾಶ್ವತವಾಗಿ ಅಂಗವೈಕಲ್ಯ ಉಂಟಾದರೂ 1 ಕೋಟಿ ರೂ. ಪರಿಹಾರ ನೀಡಲಾಗುತ್ತದೆ.
ಇದುವರೆಗೆ ರೈಲ್ವೆ ನೌಕರರಿಗೆ ಎ ಗ್ರೇಡ್ ಇದ್ದರೆ 1.2 ಲಕ್ಷ ರೂ., ಬಿ ಗ್ರೇಡ್ ನೌಕರರಿಗೆ 60 ಸಾವಿರ ರೂಪಾಯಿ ಹಾಗೂ ಸಿ ಗ್ರೇಡ್ ನೌಕರರಿಗೆ 30 ಸಾವಿರ ರೂಪಾಯಿ ವಿಮಾ ಕವರೇಜ್ ಇತ್ತು. ಈಗ ಇದನ್ನು ಗಣನೀಯವಾಗಿ ಏರಿಕೆ ಮಾಡಿರುವ ಕಾರಣ ನೌಕರರಿಗೆ ಅನುಕೂಲವಾಗಿದೆ.
ರೈಲ್ವೆ ನೌಕರರು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು, ಅವರ ಸಂಬಳ ಅದೇ ಬ್ಯಾಂಕಿನ ಖಾತೆಗೆ ಜಮೆಯಾಗಬೇಕು ಎಂದು ತಿಳಿಸಲಾಗಿದೆ. ಇನ್ನು, ನೌಕರರು ಸ್ವಾಭಾವಿಕವಾಗಿ ತೀರಿಕೊಂಡರೂ ಅವರ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಲಕ್ಷಾಂತರ ನೌಕರರು ಹೆಚ್ಚಿನ ಪ್ರಯೋಜನ ಪಡೆಯುವ ಜತೆಗೆ, ಅವರ ಕುಟುಂಬಸ್ಥರಿಗೆ ಸುರಕ್ಷತೆ ಸಿಗಲಿದೆ.