ಬೆಂಗಳೂರು: ದೇಶದಲ್ಲೀಗ ಯುಪಿಐ, ಆನ್ ಲೈನ್ ಬ್ಯಾಂಕಿಂಗ್ ಇರುವುದರಿಂದ ಹೆಚ್ಚಿನ ಗ್ರಾಹಕರು ಬ್ಯಾಂಕ್ ಗಳಿಗೆ ಹೋಗುವುದಿಲ್ಲ. ಹಣ ವರ್ಗಾವಣೆ, ಪಾವತಿ ಸುಲಭವಾಗಿರುವ ಕಾರಣ ಬಹುತೇಕ ಮಂದಿಗೆ ಬ್ಯಾಂಕ್ ಗೆ ಹೋಗುವುದೇ ಬೇಸರದ ಸಂಗತಿ. ಅದರಲ್ಲೂ, ಬ್ಯಾಂಕ್ ಗಳಿಗೆ ಹೋಗಿ ಕೆವೈಸಿ ಮಾಡಿಸುವುದು ಎಂದರೆ ಗ್ರಾಹಕರಿಗೆ ಇನ್ನಿಲ್ಲದ ತಲೆನೋವು. ಎಲ್ಲದಕ್ಕೂ ಕೆವೈಸಿ ಮಾಡಿಸಬೇಕು, ಅಗತ್ಯ ದಾಖಲೆ ಕೊಡಬೇಕು ಎಂಬುದು ಸೇರಿ ಹಲವು ಪ್ರಕ್ರಿಯೆಗಳು ಗ್ರಾಹಕರಿಗೆ ಬೇಸರ ತರಿಸುತ್ತವೆ. ಇದನ್ನು ಅರ್ಥ ಮಾಡಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಸುಲಭ ಮಾರ್ಗವನ್ನು ಕಂಡುಕೊಳ್ಳುತ್ತಿದೆ.
ಹೌದು, ಎಸ್ ಬಿಐನಲ್ಲಿ ಈಗಾಗಲೇ ಇರುವ 15 ಮಾದರಿಗಳ ಕೆವೈಸಿಗಳ ಬದಲಾಗಿ, ಒಂದೇ ಕೆವೈಸಿ ಪ್ರಕ್ರಿಯೆಯನ್ನು ಚಾಲ್ತಿಯಲ್ಲಿ ಇರಿಸಲು ಎಸ್ ಬಿ ಐ ಚಿಂತನೆ ನಡೆಸಿದೆ. ಎಸ್ ಬಿಐನಲ್ಲಿ ಉಳಿತಾಯ ಖಾತೆ, ಎಫ್ ಡಿ ಸೇರಿ ಹಲವು ಖಾತೆಗಳನ್ನು ತೆರೆದಾಗಲೆಲ್ಲ ಕೆವೈಸಿ ಮಾಡಿಸಬೇಕು. ಕೆಲವೊಮ್ಮೆ ರಿ-ಕೆವೈಸಿಗಳಿಗೂ ಬ್ಯಾಂಕ್ ಗಳು ಆದೇಶ ಹೊರಡಿಸುತ್ತವೆ. ಇದನ್ನು ತಪ್ಪಿಸಲು ಈಗ ಎಸ್ ಬಿಐ ಮುಂದಾಗಿದೆ.
ಕೆವೈಸಿ ಕುರಿತು ಎಸ್ ಬಿಐ ಮಾಹಿತಿ ನೀಡಿದೆ.“ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ, ವಿಶೇಷವಾಗಿ ಮೂಲ ಮತ್ತು ಜನ ಧನ್ ಖಾತೆಗಳ ಗ್ರಾಹಕರಿಗೆ ಆಗಾಗ ಕೆವೈಸಿ ಅಪ್ಡೇಟ್ ಮಾಡುತ್ತಿರಲೇಬೇಕು. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿತ್ತು ಮತ್ತು ಕೆಲವೊಮ್ಮೆ ಖಾತೆ ನಿರ್ಬಂಧಗಳಿಗೆ ಕಾರಣವಾಗುತ್ತಿತ್ತು. ಇದರ ಜತೆಗೆ, ಎಸ್ ಬಿಐ ಗ್ರಾಹಕರು ಹೊಸ ಸೇವೆಗಳನ್ನು ಪಡೆದಾಗಲೆಲ್ಲ ಕೆವೈಸಿ ಪ್ರಕ್ರಿಯೆಯನ್ನು ಅಥವಾ ಮರು ಕೆವೈಸಿ ಅಪ್ಡೇಟ್ ಮಾಡಬೇಕು. ಇದನ್ನು ಮನಗಂಡು ಒಂದೇ ಕೆವೈಸಿ ಇರಿಸಲು ತೀರ್ಮಾನಿಸಲಾಗಿದೆ” ಎಂದು ಎಸ್ ಬಿಐ ಚೇರ್ಮನ್ ಸಿ.ಎಸ್.ಶೆಟ್ಟಿ ಮಾಹಿತಿ ನೀಡಿದ್ದಾರೆ.
“ಒಂದೇ ಕೆವೈಸಿ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ವ್ಯವಸ್ಥೆಯನ್ನು 2026ರ ಮಾರ್ಚ್ ನಿಂದ ಜಾರಿಗೆ ತರುವ ಕುರಿತು ಚಿಂತನೆ ನಡೆದಿದೆ. ಇದರಿಂದ ಗ್ರಾಹಕರಿಗೆ ಭಾರಿ ಅನುಕೂಲವಾಗಲಿದೆ. ಒಂದೇ ಕೆವೈಸಿ ಮಾಡಿಸಿದರೆ, ಎಲ್ಲ ಸೇವೆಗಳನ್ನು ಇದರ ಮೂಲಕವೇ ಪಡೆಯಬಹುದಾಗಿದೆ,’’ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ : ಖ್ಯಾತ ಟ್ರಾವೆಲ್ ವ್ಲಾಗರ್ ಅನುನಯ್ ಸೂದ್ ನಿಧನ: 32ನೇ ವಯಸ್ಸಿಗೆ ಬದುಕು ಮುಗಿಸಿದ ಫೋರ್ಬ್ಸ್ ಡಿಜಿಟಲ್ ಸ್ಟಾರ್



















