ಬೆಂಗಳೂರು: ದೇಶದ ಷೇರು ಮಾರುಕಟ್ಟೆಯು ಸತತವಾಗಿ ಕುಸಿಯುತ್ತಿರುವ, ಅನಿಶ್ಚಿತತೆಯು ಮನೆಮಾಡಿರುವ ಹೊತ್ತಿನಲ್ಲೇ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹೊಸ ಮ್ಯೂಚುವಲ್ ಫಂಡ್ ಆರಂಭಿಸಿದೆ. ಎಸ್ ಬಿಐ ಇನ್ ಕಮ್ ಪ್ಲಸ್ ಆರ್ಬಿಟ್ರೇಜ್ ಆ್ಯಕ್ಟಿವ್ ಫಂಡ್ ಆಫ್ ಫಂಡ್ (ಎಫ್ಒಎಫ್) ಎಂಬ ಯೋಜನೆ ಇದಾಗಿದ್ದು, ಸಾಲ ಆಧಾರಿತ ಯೋಜನೆಗಳು, ಹೈಬ್ರಿಡ್ ಮಾದರಿಯಲ್ಲಿ ಹೂಡಿಕೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.
ಸಕ್ರಿಯವಾಗಿ ನಿರ್ವಹಿಸುವ ಸಾಲ-ಆಧಾರಿತ ಯೋಜನೆಗಳು ಮತ್ತು ಆರ್ಬಿಟ್ರೇಜ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಯಮಿತ ಆದಾಯ ಮತ್ತು ಬಂಡವಾಳ ಬೆಳವಣಿಗೆ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ನಿಧಿಯ ಮೊದಲ ಹಂತದ ಮಾನದಂಡವು ಶೇ.65ರಷ್ಟು ನಿಫ್ಟಿ ಕಾಂಪೋಸಿಟ್ ಸಾಲ ಸೂಚ್ಯಂಕ ಮತ್ತು ಶೇ.35ರಷ್ಟು ನಿಫ್ಟಿ 50 ಆರ್ಬಿಟ್ರೇಜ್ ಸೂಚ್ಯಂಕದ ಸಂಯೋಜನೆಯಾಗಿದೆ. ಹಾಗಾಗಿ, ಇದರಿಂದ ಉತ್ತಮ ರಿಟರ್ನ್ಸ್ ನಿರೀಕ್ಷಿಸಲಾಗಿದೆ.
ಹೊಸ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಕನಿಷ್ಠ 5 ಸಾವಿರ ರೂಪಾಯಿಯಿಂದ ಹೂಡಿಕೆ ಮಾಡಬಹುದು. ಗರಿಷ್ಠ ಯಾವುದೇ ಮೊತ್ತವನ್ನು ಈ ಯೋಜನೆಯಲ್ಲಿ ಠೇವಣಿ ಮಾಡಬಹುದು. ಹೂಡಿಕೆದಾರರು ದೈನಂದಿನ, ಸಾಪ್ತಾಹಿಕ, ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಕಂತುಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಗಳನ್ನು (ಎಸ್ಐಪಿ) ಆಯ್ಕೆ ಮಾಡಬಹುದು. ಈ ಫಂಡ್ ಅನ್ನು ಅರ್ದೇಂದು ಭಟ್ಟಾಚಾರ್ಯ ನಿರ್ವಹಿಸುತ್ತಿದ್ದಾರೆ.
ಉಳಿದಂತೆ ಶೇ.5 ರಷ್ಟನ್ನು ಹಣದ ಮಾರುಕಟ್ಟೆ ಸಾಧನಗಳು, ಟ್ರೈಪಾರ್ಟಿ ರೆಪೊ, ರಿವರ್ಸ್ ರೆಪೊ, ನಗದು ಮತ್ತು ನಗದು ಸಮಾನವಾದ ಸಾಧನಗಲ್ಲಿ ಹೂಡಿಕೆ ಮಾಡಲಿದೆ. ನ್ಯೂ ಫಂಡ್ ಆಫರ್ ಏಪ್ರಿಲ್ 23ರಿಂದ ಆರಂಭವಾಗಿದ್ದು, ಏಪ್ರಿಲ್ 30ರವರೆಗೆ ಹೂಡಿಕೆ ಮಾಡಲು ಅವಕಾಶವಿರುತ್ತದೆ.
ಗಮನಿಸಿ: ಎಸ್ ಬಿಐ ಆರಂಭಿಸಿರುವ ಮ್ಯೂಚುವಲ್ ಫಂಡ್ ಯೋಜನೆ ಕುರಿತು ನಿಮಗೆ ಮಾಹಿತಿ ನೀಡುವ ಏಕೈಕ ಕಾರಣಕ್ಕಾಗಿ ಲೇಖನವನ್ನು ಪ್ರಕಟಿಸಲಾಗಿದೆ. ನೀವು ಇದೇ ಫಂಡ್ ನಲ್ಲಿ ಹೂಡಿಕೆ ಮಾಡಬೇಕು ಎಂಬುದು ನಮ್ಮ ಶಿಫಾರಸು ಅಲ್ಲ. ಕೇವಲ ಮಾಹಿತಿ ದೃಷ್ಟಿಯಿಂದ ಲೇಖನ ಪ್ರಕಟಿಸಲಾಗಿದೆ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರ ಸಲಹೆ-ಸೂಚನೆಗಳನ್ನು ಪಡೆಯುವುದನ್ನು ಮರೆಯದಿರಿ.



















