ಬೆಂಗಳೂರು: ದೇಶದಲ್ಲೇ ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ (SBI Scholarship 2025-26) ಈಗ 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಭರ್ಜರಿ ಸ್ಕಾಲರ್ ಶಿಪ್ ಘೋಷಣೆ ಮಾಡಿದೆ. ವಿದ್ಯಾರ್ಥಿಗಳಿಗೆ 20 ಲಕ್ಷ ರೂಪಾಯಿವರೆಗೆ ಸ್ಕಾಲರ್ ಶಿಪ್ ನೀಡಲಾಗುವುದು ಎಂದು ಎಸ್ ಬಿ ಐ ಘೋಷಣೆ ಮಾಡಿದೆ. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಹೌದು, ಪ್ಲಾಟಿನಂ ಜುಬಿಲಿ ಆಶಾ ಸ್ಕಾಲರ್ ಶಿಪ್ ಯೋಜನೆ ಅಡಿಯಲ್ಲಿ ಎಸ್ ಬಿ ಐ ನಿಂದ ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಐಐಟಿ, ಐಐಎಂ, ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯಾ ಕೋರ್ಸ್ ಗಳಿಗೆ ತಕ್ಕಂತೆ 15 ಸಾವಿರ ರೂಪಾಯಿಯಿಂದ 20 ಲಕ್ಷ ರೂಪಾಯಿವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
ಅರ್ಹತೆಗಳು ಏನೇನು?
ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 23,230 ಅಭ್ಯರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ತೀರ್ಮಾನಿಸಲಾಗಿದೆ. ಶಾಲಾ ಮಟ್ಟದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ಆದಾಯ 3 ಲಕ್ಷ ರೂ.ಗಿಂತ ಹೆಚ್ಚಿರಬಾರದು. ಅದೇ ರೀತಿ, ಕಾಲೇಜು ಮತ್ತು ಇತರ ಉನ್ನತ ಶಿಕ್ಷಣ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ಆದಾಯ 6 ಲಕ್ಷ ರೂ. ಗಿಂತ ಹೆಚ್ಚಿರಬಾರದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು sbiashascholarship.co.in ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ನೋಂದಣಿ ಸಮಯದಲ್ಲಿ ತಮ್ಮ ಶೈಕ್ಷಣಿಕ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ.75ರಷ್ಟು ಅಂಕ ಅಥವಾ 7.0 CGPA ಪಡೆದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿದೆ.