ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರತದ ಷೇರು ಮಾರುಕಟ್ಟೆಯು ತೀವ್ರ ಕುಸಿತದ ಹಾದಿ ಹಿಡಿದಿದೆ. ಇದರಿಂದಾಗಿ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಎಸ್ಐಪಿಗಳಲ್ಲಿ ಹೂಡಿಕೆ ಮಾಡುವವರು, ಹೂಡಿಕೆ ಹಿಂಪಡೆಯುವವರ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗುತ್ತಿದೆ. ಇದರ ಮಧ್ಯೆಯೇ, ಹೂಡಿಕೆದಾರರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಸಿಹಿ ಸುದ್ದಿ ನೀಡಿದೆ.
ಎಸ್ಬಿಐನಲ್ಲಿ 7ರಿಂದ 14 ದಿನಗಳವರೆಗೆ ಎಫ್ಡಿ ಅಥವಾ ನಿಶ್ಚಿತ ಠೇವಣಿ ಇರಿಸಿದರೆ ಶೇ.4.5ರಷ್ಟು ಬಡ್ಡಿ ನೀಡಲಾಗುತ್ತದೆ. ಇದೇ ರೀತಿ, 15-45 ದಿನ ಎಫ್ ಡಿ ಇರಿಸಿದರೆ ಶೇ.5ರಷ್ಟು ಬಡ್ಡಿ ನೀಡಲಾಗುತ್ತದೆ. ಇನ್ನು, 46 ದಿನಗಳಿಂದ 179 ದಿನಗಳವರೆಗೆ ಹೂಡಿಕೆ ಮಾಡುವ ಬಡ್ಡಿದರವನ್ನು ಶೇ.5.10ರಿಂದ ಶೇ.5.35ಕ್ಕೆ ಏರಿಕೆ ಮಾಡಲಾಗಿದೆ. ಅಂದರೆ, ಆರು ತಿಂಗಳವರೆಗೆ ಹೂಡಿಕೆ ಮಾಡಿದರೆ ಇನ್ನುಮುಂದೆ 25 ಬೇಸಿಸ್ (0.25%) ಪಾಯಿಂಟ್ ಬಡ್ಡಿ ಹೆಚ್ಚಾಗಲಿದೆ.
ಇದೇ ರೀತಿ, 6 ತಿಂಗಳಿಂದ ಒಂದು ವರ್ಷದವರೆಗೆ ಹೂಡಿಕೆ ಮಾಡುವುದರ ಮೇಲಿನ ಬಡ್ಡಿಯನ್ನು ಶೇ.5.60ರಿಂದ ಶೇ.5.85ಕ್ಕೆ ಏರಿಕೆ ಮಾಡಲಾಗಿದೆ. ಒಂದರಿಂದ ಎರಡು ವರ್ಷಗಳವರೆಗೆ ಹೂಡಿಕೆ ಮಾಡಿದರೆ ಶೇ.6.5ರಷ್ಟು ಬಡ್ಡಿದರ ದೊರೆಯಲಿದೆ. ಎರಡರಿಂದ ಮೂರು ವರ್ಷಗಳವರೆಗೆ ಹೂಡಿಕೆ ಮಾಡಿದರೆ ಈಗ ಶೇ.6.15ರಷ್ಟು ಬಡ್ಡಿ ನೀಡಲಾಗುತ್ತದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಮಾಹಿತಿ ನೀಡಿದೆ.
ಷೇರು ಮಾರುಕಟ್ಟೆಯಲ್ಲಿ ರಕ್ತಪಾತ ಮುಂದುವರಿಯುತ್ತಿರುವ ಕಾರಣ ಹೆಚ್ಚಿನ ಜನ ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅದರಲ್ಲೂ, ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಎಸ್ ಬಿಐ ಎಫ್ ಡಿ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿರುವುದು ಹೂಡಿಕೆದಾರರಿಗೆ ಶುಭ ಸುದ್ದಿ ಎನಿಸಿದೆ.
ಇದನ್ನೂ ಓದಿ : ಕೊಪ್ಪಳದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ – ಡಿಸಿ ಸ್ಪಷ್ಟನೆ



















