ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ (SBI Card) ಬಳಸುತ್ತಿರುವವರಿಗೆ ನವೆಂಬರ್ 1ರಿಂದ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದೆ. ಹೌದು, ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಸಿ ಥರ್ಡ್ ಪಾರ್ಟಿ ಆ್ಯಪ್ ಗಳ ಮೂಲಕ ಹಣ ಪಾವತಿಸುವವರಿಗೆ, ಕ್ರೆಡಿಟ್ ಕಾರ್ಡ್ ಮೂಲಕ ಥರ್ಡ್ ಪಾರ್ಟಿ ಪೇಮೆಂಟ್ ಆ್ಯಪ್ ನ ವ್ಯಾಲೆಟ್ ಗಳಿಗೆ ದುಡ್ಡು ಹಾಕಿಕೊಳ್ಳುವವರಿಗೆ ಮುಂದಿನ ತಿಂಗಳಿಂದ ಹೆಚ್ಚುವರಿ ಶುಲ್ಕ ಅನ್ವಯವಾಗಲಿದೆ.
ಉದಾಹರಣೆಗೆ, ನೀವು ಫೋನ್ ಪೇ, ಅಮೆಜಾನ್ ಪೇ, ಮೊಬಿಕ್ವಿಕ್ ಅಥವಾ ಪೇಟಿಎಂ ಬಳಸುತ್ತಿದ್ದು, ಯಾವುದಕ್ಕಾದರೂ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್ ಮೂಲಕ ವ್ಯಾಲೆಟ್ ಗೆ 1 ಸಾವಿರ ರೂಪಾಯಿ ಜಮೆ ಮಾಡಿದರೆ, ಅದಕ್ಕೆ ಶೇ.1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಇದರಿಂದಾಗಿ ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಶಿಕ್ಷಣ ಫೀಸ್ ಕಟ್ಟಿದರೆ ಎಷ್ಟು ಶುಲ್ಕ?
ನೀವೇನಾದರೂ ಶಿಕ್ಷಣಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಥರ್ಡ್ ಪಾರ್ಟಿ ಆ್ಯಪ್ ಗಳ ಮೂಲಕ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬಳಸಿ ಪೇಮೆಂಟ್ ಮಾಡಿದರೆ, ನಿಮಗೆ ಶೇ.1ರಷ್ಟು ಹೆಚ್ಚುವರಿ ಶುಲ್ಕ ಅನ್ವಯವಾಗಲಿದೆ. ಉದಾಹರಣೆಗೆ ನೀವು ಕ್ರೆಡ್, ಚೆಕ್ ಅಥವಾ ಮೊಬಿಕ್ವಿಕ್ ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್ ಬಳಸಿ ಟ್ಯೂಷನ್ ಫೀಸ್, ಕಾಲೇಜು ಫೀಸ್ ಕಟ್ಟಿದರೆ ಶೇ.1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ
ಆದರೆ, ನೀವು ಕಾಲೇಜು ವೆಬ್ ಸೈಟ್ ಮೂಲಕವೇ ನೇರವಾಗಿ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿದರೆ, ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಎಸ್ ಬಿ ಐ ಕಾರ್ಡ್ ತಿಳಿಸಿದೆ. ಇನ್ನು, ಕ್ಯಾಶ್ ಪೇಮೆಂಟ್ ಫೀಸ್, ಚೆಕ್ ಪೇಮೆಂಟ್, ಕ್ಯಾಶ್ ಅಡ್ವಾನ್ಸ್ ಫೀಗಳನ್ನು ಯಥಾಸ್ಥಿತಿಯಲ್ಲಿಯೇ ಮುಂದುವರಿಸಲಾಗಿದೆ.



















