ಉಡುಪಿ: ಕೊಲ್ಲೂರಿನ ಸೌಪರ್ಣಿಕಾ ನದಿಗೆ ತ್ಯಾಜ್ಯ ನೀರು ಹರಿಯುವುದನ್ನು ನಿಲ್ಲಿಸಲು ಕೈಗೊಂಡಿರುವ ಕ್ರಮ ಹಾಗೂ ಸಮಯದ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (KUWSDB) ಅಧ್ಯಕ್ಷರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಚೆನ್ನೈನ ದಕ್ಷಿಣ ವಲಯ ಇತ್ತೀಚೆಗೆ ನಿರ್ದೇಶನ ನೀಡಿದೆ.
ನ್ಯಾಯಾಂಗ ಸದಸ್ಯರಾದ ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಡಾ. NGT ಪ್ರಶಾಂತ್ ಗರ್ಗವ ಅವರು ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನೆಡೆಸಿ ಈ ಆದೇಶ ಹೊರಡಿಸಿದ್ದಾರೆ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಸುತ್ತಮುತ್ತಲಿನ ವಾಣಿಜ್ಯ ಸಂಸ್ಥೆಗಳು, ಲಾಡ್ಜ್‌ಗಳು ಮತ್ತು ಹೋಟೆಲ್‌ಗಳಿಂದ ಕೊಳಚೆನೀರು ಮತ್ತು ಕಲ್ಮಶಯುಕ್ತ ನೀರನ್ನು ಹೊರಹಾಕಲಾಗುತ್ತಿದೆ ಹೀಗಾಗಿ ನದಿ ಹಲವು ವರ್ಷಗಳಿಂದ ಕಲುಷಿತವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಕೊಲ್ಲೂರಿನಲ್ಲಿ 2015 ರಲ್ಲಿ 19.97 ಕೋಟಿ ರೂ.ಗಳಿಗೆ ಭೂಗತ ಒಳಚರಂಡಿ ಯೋಜನೆ (UGSS) ಕಾಮಗಾರಿಯನ್ನು ಪ್ರಾರಂಭಿಸಲಾಯಿತು ಮತ್ತು 2020ರಲ್ಲಿ ಪೂರ್ಣಗೊಂಡಿದ್ದರೂ, ನೀರಿನ ಮಾಲಿನ್ಯ ನಿಂತಿಲ್ಲ. ಎರಡು ವರ್ಷಗಳ ಸೂಚನೆಯ ನಂತರ, ನವೆಂಬರ್ 25, 2025 ರಂದು ಉಡುಪಿ ಜಿಲ್ಲಾಧಿಕಾರಿಯವರ ವರದಿಯನ್ನು ಸಲ್ಲಿಸಲಾಗಿದ್ದರೂ, ಅದು ಸಮಗ್ರವಾಗಿಲ್ಲ ಎಂದು NGTಗೆ ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (KUWSDB) ಅಧ್ಯಕ್ಷರಿಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ NGT ತಿಳಿಸಿದೆ. ಜೊತೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿಯಮ ಉಲ್ಲಂಘನೆ ಮಾಡಿದವರ ವಿವರ ಹಾಗೂ ಕೈಗೊಂಡ ಕ್ರಮಗಳ ಕುರಿತು ಪ್ರತ್ಯೇಕ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಶೋರೂಂ | 13 ಎಲೆಕ್ಟ್ರಿಕ್ ಬೈಕ್‌ಗಳು ಸುಟ್ಟು ಭಸ್ಮ!



















