ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ಕೂಡ ರಾಜಕೀಯ ಪ್ರವೇಶಿಸಿದ್ದಾರೆ. ಹೌದು, ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸತೀಶ್ ಜಾರಕಿಹೊಳಿಯ ಪುತ್ರ ಕೂಡ ರಾಜಕೀಯ ಪ್ರವೇಶಿಸಿದಂತಾಗಿದೆ. ಇವರೇ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ರಾಹುಲ್ ಜಾರಕಿಹೊಳಿ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಕ್ಷೇತ್ರದಿಂದ ಗೆದ್ದು ಸಂಸದೆಯಾಗಿದ್ದಾರೆ. ಈಗ ಸತೀಶ್ ಜಾರಕಿಹೊಳಿ ಪುತ್ರನೂ ಪಕ್ಷದಲ್ಲಿ ಮಹತ್ವದ ಹುದ್ದೆ ಪಡೆದಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್ ಜಾರಕಿಹೊಳಿ ಆಯ್ಕೆಯಾದ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಗೋಕಾಕ್ ನ ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. ರಾಹುಲ್ ಜಾರಕಿಹೊಳಿ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ವೇಳೆ, ಸತೀಶ್ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಪರ ಘೋಷಣೆಗಳು ಕೂಡ ಕೇಳಿಬಂದಿವೆ.