ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಿರೀಕ್ಷೆಯಂತೆ ನೀರಜ್ ಚೋಪ್ರಾ ಪದಕ ಗೆದ್ದಿದ್ದಾರೆ. ಆದರೆ, ಈ ಬಾರಿ ಚಿನ್ನದ ಹುಡುಗ ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ.
ಈ ಮೂಲಕ ಭಾರತಕ್ಕೆ 5ನೇ ಪದಕ ಒಲಿದು ಬಂದಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸತತ ಎರಡನೇ ಒಲಿಂಪಿಕ್ಸ್ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ 87.58 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಚಿನ್ನಕ್ಕೆ ಮುತ್ತಿಕ್ಕಿದ್ದರು. ಆದರೆ, ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 89.45 ಮೀ. ದೂರ ಎಸೆದರೂ ಬೆಳ್ಳಿ ಗೆಲ್ಲುವಂತಾಗಿದೆ. ಇದೇ ಸ್ಪರ್ಧೆಯಲ್ಲಿ ಕಳೆದ ಒಲಿಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ಈ ಬಾರಿ ದಾಖಲೆಯ 92.97 ಮೀ. ದೂರ ಜಾವೆಲಿನ್ ಎಸೆದು ಇತಿಹಾಸ ನಿರ್ಮಿಸಿದಲ್ಲದೆ, ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಪ್ರತಿ ಕ್ರೀಡಾಕೂಟದಲ್ಲೂ ಉತ್ತಮ ಆರಂಭ ಪಡೆಯುತ್ತಿದ್ದ ನೀರಜ್ಗೆ ಈ ಬಾರಿ ಕೊಂಚ ಆಘಾತ ಕಾದಿತ್ತು. ಅವರ ಮೊದಲ ಎಸೆತವೇ ಫೌಲ್ ಆಗಿತ್ತು. ಈ ಥ್ರೋ 86 ಮೀಟರ್‌ಗಿಂತ ಹೆಚ್ಚಿದ್ದರೂ ಅದನ್ನು ಪರಿಗಣಿಸಲಾಗಿಲ್ಲ. ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಮೊದಲ ಎಸೆತವನ್ನು ಫೌಲ್ ಮಾಡಿದರು. ನಂತರ 92.97 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಭದ್ರಪಡಿಸಿಕೊಂಡರು. ಇದರೊಂದಿಗೆ ಹೊಸ ಒಲಿಂಪಿಕ್ ದಾಖಲೆಯನ್ನೂ ನಿರ್ಮಿಸಿದರು. ಮುಂದಿನ ಪ್ರಯತ್ನದಲ್ಲಿ ಪುನರಾಗಮನ ಮಾಡಿದ ನೀರಜ್, 89.45 ಮೀಟರ್ ದೂರ ಎಸೆದು ಎರಡನೇ ಸ್ಥಾನ ಖಚಿತ ಪಡಿಸಿಕೊಂಡರು. ಬೆಳ್ಳಿ ಪದಕ ಗೆದ್ದಿರುವ ನೀರಜ್, ಒಲಿಂಪಿಕ್ಸ್ ನಲ್ಲಿ ಸತತ ಎರಡು ಪದಕ ಗೆದ್ದ ಭಾರತದ ನಾಲ್ಕನೇ ಅಥ್ಲೀಟ್ ಎನಿಸಿಕೊಂಡಿದ್ದಾರೆ.