ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್ ಆಗಿದ್ದು, ಈಗ ಸ್ಯಾಟ್ ಲೈಟ್ ಹಾಗೂ ಒಟಿಟಿ ಹಕ್ಕು ಭಾರಿ ಬೆಲೆಗೆ ಮಾರಾಟವಾಗಿದೆ ಎನ್ನಲಾಗಿದೆ.
ಈ ಚಿತ್ರ ಡಿ. 25 ಕ್ಕೆ ತೆರೆಗೆ ಬರಲಿದೆ. ಎರಡು ವರ್ಷದ ನಂತರ ಸುದೀಪ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೆ ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ನಿರ್ಮಾಪಕರು ಮಾರಾಟ ಮಾಡಿದ್ದಾರೆ.
ಮ್ಯಾಕ್ಸ್’ ಸಿನಿಮಾದ ಸ್ಯಾಟಲೈಟ್ ಹಕ್ಕನ್ನು ಜೀ ಕನ್ನಡ ವಾಹಿನಿ ಖರೀದಿಸಿದೆ. ‘ಮ್ಯಾಕ್ಸ್’ ಸಿನಿಮಾದ ಸ್ಯಾಟಲೈಟ್ ಹಕ್ಕಿಗೆ ಬರೋಬ್ಬರಿ 28 ಕೋಟಿ ರೂ.ನ್ನು ಜೀ ಕನ್ನಡ ವಾಹಿನಿ ನೀಡಿದೆ. ಈ ಮೂಲಕ ಕನ್ನಡ ಮನರಂಜನೆಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಸಿನಿಮಾಗಳಲ್ಲಿ ಮ್ಯಾಕ್ ಒಂದಾಗಿದೆ. ಸಿನಿಮಾ ಬಿಡುಗಡೆ ಆದ ಎರಡೇ ತಿಂಗಳಲ್ಲಿ ಈ ಸಿನಿಮಾ ಟಿವಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ.
ಸಿನಿಮಾದ ಒಟಿಟಿ ಹಕ್ಕನ್ನು ಸಹ ಜೀ ಅವರೇ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಜೀ5 ನಲ್ಲಿ ಸಿನಿಮಾ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಡಿಜಿಟಲ್ ಹಕ್ಕನ್ನು ಸುಮಾರು 40 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ತೆಲುಗಿನ ವರಲಕ್ಷ್ಮಿ ಶರತ್ಕುಮಾರ್, ಸುನಿಲ್, ಕನ್ನಡದ ಪ್ರಮೋದ್ ಶೆಟ್ಟಿ, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದಾರೆ.