ಕೋಟ: ಇಳಕಲ್ ನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಗೇಟ್ ನ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ 12 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇಂದು(ಆದಿತ್ಯವಾರ,ಆ.24) ಬೆಳಗಿನ ಜಾವ ಈ ಘಟನೆ ಸಂಭವಿಸಿದೆ.
ಬೆಳಗ್ಗೆ ಸುಮಾರು 4.30 ರ ಸುಮಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ನಿಂದ 500 ಮೀಟರ್ ಹಿಂದಿದ್ದ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ 36 ಮಂದಿ ಪ್ರಯಾಣಿಕರಿದ್ದು, ಅಪಘಾತದ ರಭಸಕ್ಕೆ 12 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಉಳಿದ ಪ್ರಯಾಣಿಕರು ಹಾಗೂ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗಾಯಗೊಂಡವರನ್ನು ತತ್ ಕ್ಷಣ ಕೋಟ ಜೀವನ್ ಮಿತ್ರ ಹಾಗೂ ಟೋಲ್ ಆಂಬುಲೆನ್ಸ್ ನಲ್ಲಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.