ಚೆನ್ನೈ: ಕಳೆದ ಕೆಲ ದಿನಗಳಿಂದ ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯುವ ಕುರಿತು ಕೇಳಿಬಂದಿದ್ದ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಂತಿದೆ. ಭಾರತ ತಂಡದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಅವರ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ ಸಂಜು, “ರಾಜಸ್ಥಾನ್ ರಾಯಲ್ಸ್ ತಂಡವು ನನ್ನ ವೃತ್ತಿಜೀವನಕ್ಕೆ ಮಹತ್ವದ ಕೊಡುಗೆ ನೀಡಿದೆ. ಆ ಫ್ರಾಂಚೈಸಿಯೊಂದಿಗೆ ನನ್ನ ಪಯಣ ಅದ್ಭುತವಾಗಿದೆ” ಎಂದು ಹೇಳುವ ಮೂಲಕ, ತಂಡ ತೊರೆಯುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಐಪಿಎಲ್ ಸೀಸನ್‌ಗೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ್ ರಾಯಲ್ಸ್ ₹18 ಕೋಟಿಗೆ ಮುಂದಿನ ಮೂರು ಸೀಸನ್‌ಗಳಿಗೆ ಉಳಿಸಿಕೊಂಡಿತ್ತು. ಆದರೂ, ಸಂಜು ಅವರು ರಾಜಸ್ಥಾನವನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಆಸಕ್ತಿ ತೋರಿದ್ದಾರೆ ಎಂದು ಕೆಲವು ವರದಿಗಳು ಬಂದಿದ್ದವು.
ಈ ಬಗ್ಗೆ ಮಾತನಾಡಿದ ಸಂಜು, “ಕೇರಳದ ಸಣ್ಣ ಹಳ್ಳಿಯೊಂದರಿಂದ ಬಂದಿದ್ದ ನನ್ನ ಪ್ರತಿಭೆಯನ್ನು ರಾಹುಲ್ (ದ್ರಾವಿಡ್) ಸರ್ ಮತ್ತು ಮನೋಜ್ ಬದಳೆ ಸರ್ ಗುರುತಿಸಿದರು. ನನಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟರು. ರಾಜಸ್ಥಾನ್ ನನ್ನ ಮೇಲೆ ನಂಬಿಕೆ ಇಟ್ಟು ನನ್ನ ಪಯಣದುದ್ದಕ್ಕೂ ಪ್ರೋತ್ಸಾಹಿಸಿದೆ. ನಾನು ಫ್ರಾಂಚೈಸಿಗೆ ಆಭಾರಿಯಾಗಿರುವೆ. ಅದಕ್ಕಾಗಿಯೇ ಈ ತಂಡ ನನಗೆ ಬಹಳಷ್ಟು ಆಪ್ತವಾಗಿದೆ,” ಎಂದರು. ಈ ಮಾತುಗಳ ಮೂಲಕ ಸಂಜು ರಾಜಸ್ಥಾನ ರಾಯಲ್ಸ್‌ನಲ್ಲಿಯೇ ಮುಂದುವರಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಸಂಜು ಸ್ಯಾಮ್ಸನ್ ಕಳೆದ ವರ್ಷ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ, ಮುಂದಿನ ತಿಂಗಳು ಆರಂಭವಾಗಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಅವರು ಭಾರತ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ಅವರು ಉತ್ತಮ ಪ್ರದರ್ಶನ ನೀಡಿದರೆ, 2026ರಲ್ಲಿ ನಡೆಯುವ ಟಿ20 ವಿಶ್ವಕಪ್ ತಂಡದಲ್ಲಿಯೂ ಸ್ಥಾನ ಖಚಿತವಾಗಬಹುದು.