ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ (Chief Justice) ಸಂಜೀವ್ ಖನ್ನಾ (Justice Sanjiv Khanna) ಅವರನ್ನು ನೇಮಕ ಮಾಡಲಾಗಿದೆ.
ಸದ್ಯ ಇರುವ ಸಿಜೆಐ ಡಿ.ವೈ.ಚಂದ್ರಚೂಡ್ ಅವರು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಮುಂದಿನ ಸಿಜೆಐ ಆಗಿ ನೇಮಕ ಮಾಡಲಾಗಿದೆ. ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಹಾಲಿ ಸಿಜೆಐ ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸಂಜೀವ್ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಸಿಜೆಐ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಖನ್ನಾ ಅವರ ಹೆಸರನ್ನು ಈ ಹುದ್ದೆಗೆ ಸೂಚಿಸಿದ್ದರು. ಹೀಗಾಗಿ ಸಂಜೀವ್ ಖನ್ನಾ ಅವರನ್ನೇ ಮುಖ್ಯ ಸಿಜೆಐ ಆಗಿ ನವೆಂಬರ್ 11ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು 2025, ಮೇ 13ರಂದು ನಿವೃತ್ತರಾಗಲಿದ್ದಾರೆ. ವಕೀಲರಾಗಿ 1983ರಲ್ಲಿ ತೊಡಗಿಕೊಂಡ ಅವರು ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ಮತ್ತು ಪರಿಸರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ.