ಬೆಂಗಳೂರು: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗಾಗಿ ಸಾಂದೀಪನಿ ಶಿಷ್ಯವೇತನ ಯೋಜನೆ ಆರಂಭಿಸಿದೆ. ಈ ಯೋಜನೆ ಅನ್ವಯ 2025-26ನೇ ಸಾಲಿನಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳಿಗೆ 1.15 ಲಕ್ಷ ರೂಪಾಯಿವರೆಗೆ ಸ್ಕಾಲರ್ ಶಿಪ್ ನೀಡುವುದಾಗಿ ಘೋಷಣೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಗೆ 2026ರ ಫೆಬ್ರವರಿ 28 ಕೊನೆಯ ದಿನವಾಗಿದೆ.
ರಾಜ್ಯ ಸರ್ಕಾರದ ಅನುದಾನದೊಂದಿಗೆ ಬ್ರಾಹ್ಮಣ ಸಮುದಾಯದವರ ಶಿಕ್ಷಣದ ಪ್ರಗತಿಗಾಗಿ ರೂಪಿಸಿರುವ ಯೋಜನೆ ಇದಾಗಿದೆ. ಎರಡು ವಿಧಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಪಿಯುಸಿ, ಡಿಪ್ಲೋಮಾ ಹಾಗೂ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಸಿಕ 1,500 ರೂಪಾಯಿಯಂತೆ 10 ತಿಂಗಳಿಗೆ ಒಟ್ಟು 15 ಸಾವಿರ ರೂಪಾಯಿ ನೀಡುವುದು ಒಂದು ವಿಧದ ಶಿಷ್ಯವೇತನವಾಗಿದೆ.
ಇನ್ನೊಂದು ವಿಧದಲ್ಲಿ, ಸಿಇಟಿಯಲ್ಲಿ ಅರ್ಹತೆ ಪಡೆದು ಪದವಿ ಅಥವಾ ಸ್ನಾತಕೋತ್ತರ ವೃತ್ತಿಪರ ಕೋರ್ಸ್ ಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಸಹಾಯಧನ ನೀಡಲಾಗುತ್ತದೆ. ವಿದ್ಯಾರ್ಥಿಗಳು ದಾಖಲಾತಿ ಸಂದರ್ಭದಲ್ಲಿ ಪಾವತಿಸಿರುವ ಸರ್ಕಾರಿ ಶುಲ್ಕದ ಮೂರನೆ ಎರಡಷ್ಟು ಭಾಗವನ್ನು (ಗರಿಷ್ಠ ಮೊತ್ತ 1 ಲಕ್ಷ ರೂ.ವರೆಗೆ) ಸಹಾಯಧನವಾಗಿ ಪಾವತಿಸಲಾಗುತ್ತದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಮ್ಯಾನೇಜ್ ಮೆಂಟ್ ಸೀಟ್ ಪಡೆದ ವಿದ್ಯಾರ್ಥಿಗಳು, ಶುಲ್ಕ ಮರುಪಾವತಿ ಮತ್ತು ವಾರ್ಷಿಕ ನಿರ್ವಹಣಾ ವೆಚ್ಚ ಪಾವತಿಗೆ ಅರ್ಹರಿಲ್ಲ.
ಅರ್ಜಿದಾರರು ಬ್ರಾಹ್ಮಣ ಸಮುದಾಯಕ್ಕೆ ಸೇರಿರಬೇಕು. ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಮೀರಿರಬಾರದು. ಕರ್ನಾಟಕ ಸ್ಟೇಟ್ ಸಿಲಬಸ್ ಅಳವಡಿಸಿಕೊಂಡ ಕೋರ್ಸ್ ಗಳಿಗೆ ಪ್ರವೇಶ ಪಡೆದಿರಬೇಕು. ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು. ಜಾತಿ, ಆದಾಯ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರ, ಆಧಾರ್ ಕಾರ್ಡ್ ಸೇರಿ ಹಲವು ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ssp.postmatric.karnataka.gov.in/ ಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಗುಪ್ತಚರ ಇಲಾಖೆಯಲ್ಲಿ 362 ಹುದ್ದೆಗಳ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ



















