ಸಾಮಾಜಿಕ ಜಾಲತಾಣದಲ್ಲಿ ನಟಿಯೊಬ್ಬರಿಗೆ ಕಿರುಕುಳ ಹಾಗೂ ಬೆದರಿಕೆ ಒಡ್ಡಿದ ಆರೋಪದ ಮೇಲೆ ಮಲಯಾಳಂ ಸಿನಿಮಾ ನಿರ್ಮಾಪಕ ಸನಲ್ ಕುಮಾರ್ ಶಶಿಧರನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿದ್ದಾರೆ. ಫೇಸ್‌ಬುಕ್‌ನಲ್ಲಿ ಅವರು ನಟಿಯ ವಿರುದ್ದ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ್ದರು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಟಿ ಸೋಮವಾರ ದೂರು ನೀಡಿದ್ದು, ತಕ್ಷಣವೇ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸನಲ್ ಕುಮಾರ್ ಇತ್ತೀಚೆಗೆ ಪೋಸ್ಟ್ ಒಂದನ್ನು ಹಾಕಿ ನಟಿ ಹಾಗೂ ಆಕೆಯ ಪುತ್ರಿಗೆ ಜೀವಾಪಾಯ ಇದೆ ಎಂದು ಹೇಳಿದ್ದರು. ಜತೆಗೆ ಆಕೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನೂ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಈ ಪ್ರಕರಣದಲ್ಲಿ ತನ್ನ ವಿರುದ್ಧ ದಾಖಲಾದ ಎಫ್ಐಆರ್‌ನ ಪ್ರತಿಯನ್ನು ಸೋಮವಾರ ತಮ್ಮ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ನಟಿಯ ಹೆಸರಿನಲ್ಲಿ ಬೇರೊಬ್ಬರು ತಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದರು. ವಾಸ್ತವದಲ್ಲಿ ನಟಿಯೇ ದೂರು ನೀಡಿದ್ದಾರೆ.
ಈ ಹಿಂದೆಯೂ ಕೇಸ್ ದಾಖಲಾಗಿತ್ತು
ಸಾಮಾಜಿಕ ಮಾಧ್ಯಮಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಈ ಮೇ 2022ರಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇದೀಗ ಆರೋಪಿ ಸನಲ್ ಕುಮಾರ್ ಅಮೆರಿಕದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊಚ್ಚಿ ನಗರ ಪೊಲೀಸ್ ಆಯುಕ್ತ ಪುಟ್ಟ ವಿಮಲಾದಿತ್ಯ ಅವರನ್ನು ಮಾತನಾಡಿ, ಆರೋಪಿ ವಿದೇಶದಲ್ಲಿದ್ದರೂ ಎಲ್ಲ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಂಗಳವಾರ ಹೇಳಿದ್ದಾರೆ.
ಸನಲ್ ಹಾಕಿರುವ ಫೇಸ್ಬುಕ್ ಪೋಸ್ಟ್ ಮಾನಹಾನಿಕರ ವಿಷಯ ಒಳಗೊಂಡಿರುವುದರಿಂದ ಅದನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಅದೇ ರೀತಿ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಇರುವ ಮಾನಹಾನಿಕಾರಕ ಪೋಸ್ಟ್‌ಗಳನ್ನು ಡಿಲೀಟ್ ಮಾಡಿಸುವುದಕ್ಕೆ ನಟಿಯು ಫೇಸ್‌ಬುಕ್‌ಗೆ ದೂರು ನೀಡಬಹುದು ಎಂಬುದಾಗಿಯೂ ಅವರು ಹೇಳಿದ್ದಾರೆ.