ಟಾಲಿವುಡ್ ನಟಿ ಸಮಂತಾ ರುತ್‌ಪ್ರಭು ಸಿನಿಮಾಗಳ ಜೊತೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬ ಹಾಗೂ ಹಬ್ಬದ ಆಚರಣೆ ವೇಳೆ ಎನ್‌ಜಿಓಗಳಿಗೆ ಭೇಟಿ ನೀಡಿ, ಅರ್ಥಪೂರ್ಣ ಆಚರಣೆ ಮಾಡುತ್ತಾರೆ. ಇದೀಗ ದೀಪಾವಳಿ ಹಬ್ಬವನ್ನು ಅನಾಥಾಶ್ರಮದ ಮಕ್ಕಳ ಜೊತೆ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.

ದೇವರ ಮಕ್ಕಳ ಜೊತೆ ದೀಪಾವಳಿ ಆಚರಿಸಿರುವ ನಟಿ ಸಮಂತಾ, ಸರಳವಾಗಿ ಅನಾಥಾಶ್ರಮದಲ್ಲಿ ದೀಪ ಹಚ್ಚಿ ದೀಪಾವಳಿ ಆಚರಿಸಿದ್ದಾರೆ. ಮಕ್ಕಳ ಜೊತೆ ಕೆಲಹೊತ್ತು ಕಾಲ ಕಳೆದಿದ್ದಾರೆ. ಈ ವೇಳೆ ದೀಪಾವಳಿ ಉಡುಗೊರೆ ನೀಡಿ ಅವರ ಮುಖದಲ್ಲಿ ಸಂತಸ ಮೂಡಲು ಕಾರಣರಾಗಿದ್ದಾರೆ. ವಿಚ್ಛೇದನದ ನಂತರ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಸಮಂತಾ ಈಗ ಇಂಡಿಪೆಂಡೆಂಟ್ ಉಮೆನ್.
ಕಳೆದ ವರ್ಷ ತಂದೆಯನ್ನೂ ಕಳೆದುಕೊಂಡಿರುವ ಸಮಂತಾ, ಅನಾರೋಗ್ಯದ ವಿರುದ್ಧ ನಿತ್ಯ ಹೋರಾಟ ನಡೆಸಿದ್ದಾರೆ. ಸ್ಪೂರ್ತಿ ಫೌಂಡೇಶನ್, ಹ್ಯಾಪಿ ಹೋಮ್ಸ್ ಹಾಗೂ ಡಿಸೈರ್ ಸೊಸೈಟಿ ಎನ್‌ಜಿಓಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಮಂತಾ ಪ್ರತಿ ವರ್ಷವೂ ಅತಿಥಿಯಾಗಿ ಬಂದು ಮಕ್ಕಳ ಜೊತೆ ದೀಪಾವಳಿ ಆಚರಣೆ ಮಾಡುತ್ತಾರೆ. ಅದರಂತೆ ಈ ವರ್ಷವೂ ಹಬ್ಬದ ಆಚರಣೆ ಮಾಡಿದ್ದಾರೆ.