ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಹೃದಯಾಘಾತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಯುವಕರೇ ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಇಡೀ ರಾಜ್ಯವನ್ನೇ ಆತಂಕಕ್ಕೊಳಪಡಿಸಿದೆ.
ಹೃದಯಾಘಾತದ ಪ್ರಕರಣಗಳ ಬಗ್ಗೆ ತಜ್ಞರು ಸರ್ಕಾರಕ್ಕೆ ಈಗಾಗಲೇ ಅಧ್ಯಯನ ವರದಿಯನ್ನು ಒಪ್ಪಿಸಿದ್ದು, ಹೃದಯಾಘಾತಕ್ಕೆ ಅತಿಯಾದ ಉಪ್ಪು ಬಳಕೆ ಕೂಡಾ ಒಂದು ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಹಾಗೂ ಆಹಾರ ಇಲಾಖೆ ಎಚ್ಚರಗೊಂಡಿದ್ದು, ಉಪ್ಪಿನ ಗುಣಮಟ್ಟ ತಿಳಿಯುವುದಕ್ಕೆ ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.
ಉಪ್ಪಿನ ಗುಣಮಟ್ಟದ ಮೇಲೆ ಆಹಾರ ಇಲಾಖೆಗೆ ಅನೇಕ ದೂರುಗಳು ಬರುತ್ತಿದ್ದು, ಮತ್ತು ಅಧ್ಯಯನ ವರದಿಯಲ್ಲೂ ಅತಿಯಾದ ಉಪ್ಪನ್ನು ಸೇವಿಸುವುದರಿಂದಲೇ ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂಬ ಅಂಶ ಬಯಲಾಗಿರುವುದರಿಂದ ಆಹಾರ ಇಲಾಖೆ ಈಗ ಉಪ್ಪಿನ ಗುಣಮಟ್ಟ ತಿಳಿಯುವುದಕ್ಕೆ ಮುಂದಾಗಿದೆ.
ರುಚಿಯನ್ನು ಹೆಚ್ಚಿಸುವ ಉಪ್ಪಿನಲ್ಲೀಗ ಕಲಬೆರಕೆ ಹಾಗೂ ಗುಣಮಟ್ಟವಿಲ್ಲ ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಉಪ್ಪಿನ ಸ್ಯಾಂಪಲ್ ಕಲೆಟ್ಟ್ ಮಾಡಿಕೊಳ್ಳಲಾಗುತ್ತಿದೆ. ರಾಜಧಾನಿ ಬೆಂಗಳೂರಿನ ಸುಮಾರು 50 ಕ್ಕೂ ಹೆಚ್ಚು ಕಡೆಗಳಲ್ಲಿ ಉಪ್ಪಿನ ಸ್ಯಾಂಪಲ್ಸ್ ಪಡೆದು ಗುಣಮಟ್ಟ ಪರೀಕ್ಷೆಗೆ ಈಗ ಅಧಿಕಾರಿಗಳು ಮುಂದಾಗಿದ್ಧಾರೆ.
ಉಪ್ಪಿನಲ್ಲಿ ಕಲಬೆರಕೆಯಾಗಿದೆಯೇ.? ಕಳಪೆ ಗುಣಮಟ್ಟದ ಉಪ್ಪು ಮಾರಾಟ ಮಾಡಲಾಗುತ್ತಿದೆಯೇ ? ಕಲಬೆರಕೆಯ ಉಪ್ಪಿನ ಸೇವನೆಯಿಂದ ವ್ಯಕ್ತಿಯ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮ ಬೀಳಲಿದೆ ಬುವುದನ್ನು ಪರೀಕ್ಷೆಯ ಮೂಲಕ ತಿಳಿಯಲಾಗುತ್ತದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಕರ್ನಾಟಕ ನ್ಯೂಸ್ ಬೀಟ್ ಗೆ ಮಾಹಿತಿ ನೀಡಿದ್ದಾರೆ.


















