ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ಸರ್ಕಾರದ ನಿರ್ಧಾರದ ಬಗ್ಗೆ ಪಾಕ್ ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಆಗಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ಈ ನಿರ್ಧಾರ ನಮ್ಮ ನಿಯಂತ್ರಣದಲ್ಲಿಲ್ಲ, ಸರ್ಕಾರ ಮತ್ತು ಮಂಡಳಿಯ ಆದೇಶವನ್ನು ಪಾಲಿಸುವುದಷ್ಟೇ ನಮ್ಮ ಕರ್ತವ್ಯ,” ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಭಾನುವಾರವಷ್ಟೇ ಪಾಕಿಸ್ತಾನ ಸರ್ಕಾರವು ತನ್ನ ತಂಡಕ್ಕೆ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದೆಯಾದರೂ, ಫೆಬ್ರವರಿ 15ರಂದು ನಡೆಯಬೇಕಿದ್ದ ಭಾರತದ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಲ್ಮಾನ್ ಆಗಾ ಹೇಳಿದ್ದೇನು?
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸಲ್ಮಾನ್ ಆಗಾ, “ಹೌದು, ನಾವು ವಿಶ್ವಕಪ್ ಆಡಲು ಹೋಗುತ್ತೇವೆ. ಆದರೆ ಭಾರತದ ವಿರುದ್ಧ ಆಡದಿರುವ ನಿರ್ಧಾರ ನಮ್ಮದಲ್ಲ. ಈ ವಿಷಯದಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಮತ್ತು ಪಿಸಿಬಿ ಅಧ್ಯಕ್ಷರು ಏನು ಸೂಚಿಸುತ್ತಾರೋ ಅದನ್ನು ನಾವು ಪಾಲಿಸಬೇಕಾಗುತ್ತದೆ. ಅವರ ಆದೇಶದಂತೆ ನಾವು ನಡೆದುಕೊಳ್ಳುತ್ತೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಹಿನ್ನೆಲೆಯೇನು?
ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಆಡಲು ನಿರಾಕರಿಸಿದ್ದ ಬಾಂಗ್ಲಾದೇಶ ತಂಡವನ್ನು ಐಸಿಸಿ ಟೂರ್ನಿಂದ ಕೈಬಿಟ್ಟು, ಸ್ಕಾಟ್ಲೆಂಡ್ ತಂಡಕ್ಕೆ ಸ್ಥಾನ ನೀಡಿತ್ತು. ಇದಕ್ಕೆ ಬೆಂಬಲವಾಗಿ ನಿಂತಿದ್ದ ಪಾಕಿಸ್ತಾನ, ಇದೀಗ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಮೂಲಕ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿದೆ.
ಪಾಕಿಸ್ತಾನಕ್ಕೆ ಸಂಕಷ್ಟ?
ಒಂದು ವೇಳೆ ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಬೇಕಿರುವ ಪಂದ್ಯಕ್ಕೆ ಪಾಕಿಸ್ತಾನ ಗೈರಾದರೆ, ಐಸಿಸಿ ನಿಯಮಗಳ ಪ್ರಕಾರ ಅದನ್ನು ‘ಫೋರ್ಫಿಟ್’ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಪಾಕಿಸ್ತಾನ ಅಂಕಗಳನ್ನು ಕಳೆದುಕೊಳ್ಳುವುದಲ್ಲದೆ, ಐಸಿಸಿಯಿಂದ ಆರ್ಥಿಕ ನಿರ್ಬಂಧ ಮತ್ತು ಮುಂದಿನ ಟೂರ್ನಿಗಳ ಆತಿಥ್ಯದ ಹಕ್ಕನ್ನು ಕಳೆದುಕೊಳ್ಳುವ ಭೀತಿಯನ್ನೂ ಎದುರಿಸಬೇಕಾಗುತ್ತದೆ.
ಸದ್ಯ ಪಾಕಿಸ್ತಾನ ತಂಡವು ‘ಎ’ ಗುಂಪಿನಲ್ಲಿದ್ದು, ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ವಿಶ್ವಾಸದಲ್ಲಿರುವ ಪಾಕ್ ತಂಡಕ್ಕೆ, ಸರ್ಕಾರದ ಈ ರಾಜಕೀಯ ನಿರ್ಧಾರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದನ್ನೂ ಓದಿ : ಟಿ20 ವಿಶ್ವಕಪ್ : ಭಾರತ ವಿರುದ್ಧ ಆಡಲು ಪಾಕಿಸ್ತಾನ ನಕಾರ – ಐಸಿಸಿ ನಿಲುವೇನು? ಪಾಕ್‌ಗೆ ಕಾದಿದೆಯಾ ಕಠಿಣ ಶಿಕ್ಷೆ?



















