ಮುಂಬೈ: ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. 2021ರ ಅರ್ಜೆಂಟೀನಾದ ಚಿತ್ರ “ಸೆವೆನ್ ಡಾಗ್ಸ್” ರಿಮೇಕ್‌ನಲ್ಲಿ ವಿಶೇಷ ಪಾತ್ರದೊಂದಿಗೆ ಸಲ್ಲು ಹಾಲಿವುಡ್‌ಗೆ ಎಂಟ್ರಿ ಪಡೆದಿದ್ದಾರೆ.
ದುಬೈನಲ್ಲಿ ಇದರ ಚಿತ್ರೀಕರಣ ನಡೆಯುತ್ತಿದ್ದು, ಅವರ ಫಸ್ಟ್ ಲುಕ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದರಲ್ಲಿ ಸಲ್ಲು ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ವಿಡಿಯೋಗಳು ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚಿತ್ರೀಕರಣದ ಸಮಯದಲ್ಲಿ, ಅವರೊಂದಿಗೆ ಅವರ ಸ್ನೇಹಿತ ಮತ್ತು ಸಹ ನಟ ಸಂಜಯ್ ದತ್ ಕೂಡ ಜತೆಗಿದ್ದರು.
ಸಲ್ಮಾನ್ ಖಾನ್ ಆಟೋ ಡ್ರೈವರ್ ಪಾತ್ರದಲ್ಲಿ, ಕಂದು ಬಣ್ಣದ ಅಂಗಿ, ಅದಕ್ಕೆ ಮ್ಯಾಚಿಂಗ್ ಪ್ಯಾಂಟ್ ಮತ್ತು ಕಣ್ಣಿಗೆ ಸನ್ ಗ್ಲಾಸ್ ಧರಿಸಿ ಆಟೋರಿಕ್ಷಾಗೆ ವಾಲಿ ನಿಂತಿರುವ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಅವರ ಪಕ್ಕದಲ್ಲಿ, ಸೂಟ್ ಧರಿಸಿದ ಸಂಜಯ್ ದತ್ ನಿಂತು, ಇತರರನ್ನು ತಬ್ಬಿಕೊಳ್ಳುವ ದೃಶ್ಯವನ್ನು ಕಾಣಬಹುದಾಗಿದೆ.
ವೈರಲ್ ಆಗಿರುವ ಮತ್ತೊಂದು ಕ್ಲಿಪ್ ನಲ್ಲಿ, ಸಲ್ಮಾನ್ ಖಾನ್ ಭಾರೀ ಭದ್ರತೆಯ ನಡುವೆ ಶೂಟಿಂಗ್ ಸ್ಥಳಕ್ಕೆ ಆಗಮಿಸುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಮುಂಬೈನ ಧಾರಾವಿಯ ಕೊಳೆಗೇರಿಗಳನ್ನು ಹೋಲುವಂತಹ ಬೃಹತ್ ಸೆಟ್ ಅನ್ನು ದುಬೈನಲ್ಲಿ ನಿರ್ಮಿಸಲಾಗಿದೆ. ಅಲ್ಲೇ ಚಿತ್ರೀಕರಣ ನಡೆಯುತ್ತಿದೆ.
ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ಕಪ್ಪಗಿನ ಸೂಟ್ ಧರಿಸಿರುವು ಫೋಟೋಗಳು ಕೂಡ ಟ್ವೀಟರ್ ನಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ, ಸಲ್ಮಾನ್ ಖಾನ್ ಅವರ ವಿಶ್ವಾಸಾರ್ಹ ಅಂಗರಕ್ಷಕ ಶೇರಾ ಅವರು, ಸಲ್ಮಾನ್ ಖಾನ್ ಮತ್ತು ರಷ್ಯಾದ ಮಾಜಿ ಮಿಕ್ಸೆಡ್ ಮಾರ್ಷಲ್ ಆರ್ಟಿಸ್ಟ್ ಖಬೀಬ್ ನುರ್ಮಾಗೊಮೆಡೊವ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. “ಒಂದೇ ಫ್ರೇಮ್‌ನಲ್ಲಿ ಇಬ್ಬರು ದಂತಕಥೆಗಳು” ಎಂಬ ಅಡಿಬರಹವನ್ನೂ ಅವರು ಆ ಪೋಟೋಗೆ ನೀಡಿದ್ದರು. ಹಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಅವರ ಪಾತ್ರದ ವಿವರಗಳು ರಹಸ್ಯವಾಗಿದ್ದರೂ, ಇದರಲ್ಲಿ ಅವರು ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಹಾಲಿವುಡ್‌ಗೆ ಕಾಲಿಟ್ಟಿರುವ ಪ್ರಿಯಾಂಕಾ ಛೋಪ್ರಾ, ದೀಪಿಕಾ ಪಡುಕೋಣೆ ಮತ್ತು ಅಲಿ ಫಜಲ್‌ರಂಥ ತಾರೆಯರ ಸಾಲಿಗೆ ಈಗ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರೂ ಸೇರಿದಂತಾಗಿದೆ. ಸಲ್ಮಾನ್ ಖಾನ್ ಅವರ ಹಿಂದಿನ ಚಿತ್ರ ಟೈಗರ್ 3. ಅದರ ನಂತರದ ಸಿಕಂದರ್ ಸಿನಿಮಾ ಇದೇ ವರ್ಷದ ಈದ್ ಹಬ್ಬದಂತೆ ಬಿಡುಗಡೆಯಾಗಲಿದೆ.