ನವದೆಹಲಿ: 1984ರ ಸಿಖ್ ವಿರೋಧಿ ಗಲಭೆಯಲ್ಲಿ ಇಬ್ಬರು ಸಿಖ್ಖರನ್ನು ಕೊಂದ ಪ್ರಕರಣದ ಪ್ರಮುಖ ಆರೋಪಿ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ಗೆ (Sajjan Kumar) ವಿಶೇಷ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಇದು ಕುಮಾರ್ಗೆ ವಿಧಿಸಲಾದ ಎರಡನೇ ಜೀವಾವಧಿ ಶಿಕ್ಷೆಯಾಗಿದ್ದು, ಅವರು ಈಗಾಗಲೇ ದೆಹಲಿ ಕಂಟೋನ್ಮೆಂಟ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಜೀವಾವಧಿ ಶಿಕ್ಷೆಯ ಜತೆಗೆ ಕುಮಾರ್ಗೆ ಗಲಭೆ ಸೃಷ್ಟಿಸಿದಕ್ಕಾಗಿ ಎರಡು ವರ್ಷ, ಮಾರಕ ಶಸ್ತ್ರಾಸ್ತ್ರಗಳೊಂದಿಗೆ ಗಲಭೆ ನಡೆಸಿದ ಆರೋಪಕ್ಕೆ ಮೂರು ವರ್ಷ ಶಿಕ್ಷೆ ಹಾಗೂ ದಂಡ, ಗಂಭೀರ ಗಾಯ ಅಥವಾ ಸಾವಿಗೆ ಕಾರಣವಾಗುವ ಉದ್ದೇಶದೊಂದಿಗೆ ಅಪರಾಧ ನಡೆಸಿದ ಆರೋಪಕ್ಕೆ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ.
ಸರಸ್ವತಿ ವಿಹಾರ್ ಪ್ರದೇಶದಲ್ಲಿ ಈ ಹತ್ಯೆ ನಡೆದಿತ್ತು. ದೂರುದಾರರು ಮಾಜಿ ಕಾಂಗ್ರೆಸ್ ಸಂಸದರಿಗೆ ಮರಣ ದಂಡನೆ ವಿಧಿಸಬೇಕೆಂದು ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದರು. ಆದರೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಫೆ. 21ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿತ್ತು.
1984 ನವೆಂಬರ್ 1ರಂದು ಸಿಖ್ ವಿರೋಧಿ ದಂಗೆಯ ಸಮಯದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಮಗ ತರುಣದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು.ಈ ಪ್ರಕರಣದಲ್ಲಿ ಮಾಜಿ ಸಂಸದ ಸಜ್ಜನ್ ಕುಮಾರ್ ದಂಗೆ ನಡೆಸಿದ ಗುಂಪನ್ನು ಮುನ್ನಡೆಸುತ್ತಿದ್ದರು ಎಂಬ ಆರೋಪವಿತ್ತು. ಸುದೀರ್ಘ ವಿಚಾರಣೆಯ ಬಳಿಕ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ಫೆ.12 ತೀರ್ಪು ನೀಡಿತ್ತು.
ಇಂದಿರಾ ಹತ್ಯೆಗೆ ಸೇಡು
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಮಾರಕಾಸ್ತ್ರವನ್ನು ಹಿಡಿದ ಗುಂಪು ಸಿಖ್ರ ಮೇಲೆ ಹಲ್ಲೆ ಮಾಡಿತ್ತು. ಮನೆಗೆ ನುಗ್ಗಿದ್ದ ದಾಳಿಕೋರರು ಪತಿ ಹಾಗೂ ಮಗನ ಹತ್ಯೆ ಮಾಡಿ, ಲೂಟಿ ಮಾಡಿದ್ದಾರೆಂದು ಜಸ್ವಂತ್ ಅವರ ಪತ್ನಿ ಸಾಕ್ಷಿ ನುಡಿದಿದ್ದರು. ಹಿಂಸಾಚಾರ ಮತ್ತು ಅದರ ಪರಿಣಾಮಗಳ ತನಿಖೆಗಾಗಿ ಸ್ಥಾಪಿಸಲಾದ ನಾನಾವತಿ ಆಯೋಗವು, ದೆಹಲಿಯಲ್ಲಿ ಗಲಭೆಗೆ ಸಂಬಂಧಿಸಿದಂತೆ 587 ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಎಂದು ವರದಿ ಮಾಡಿದೆ.
ಸಜ್ಜನ್ ಕುಮಾರ್, 1984 ರ ನವೆಂಬರ್ 1 ಮತ್ತು 2 ರಂದು ದೆಹಲಿಯ ಪಾಲಂ ಕಾಲೋನಿಯಲ್ಲಿ ನಡೆದ ಐದು ಜನರ ಹತ್ಯೆಯಲ್ಲಿಯೂ ಭಾಗಿಯಾಗಿದ್ದರು. ಆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ಮೇಲ್ಮನವಿ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ.