ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಬಂಗಲೆಯಲ್ಲಿ ದರೋಡೆ ಯತ್ನ ಮತ್ತು ಚೂರಿ ಇರಿತ ಪ್ರಕರಣ ನಡೆದ ಬೆನ್ನಲ್ಲೇ ಈಗ ಸೈಫ್ ಅವರಿಗೆ ದಿನದ 24 ಗಂಟೆಯೂ ಭದ್ರತೆ ಒದಗಿಸಲು ಮುಂಬೈ ಪೊಲೀಸರು ನಿರ್ಧರಿಸಿದ್ದಾರೆ. ಅವರ ಕಾವಲಿಗಾಗಿ ಪೊಲೀಸ್ ಕಾನ್‌ಸ್ಟೇಬಲ್‌ವೊಬ್ಬರನ್ನು ನಿಯೋಜಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಸೈಫ್ ಅವರೇ ತಮ್ಮ ಭದ್ರತೆಗೆಂದು ನಟ ರೋಣಿತ್ ರಾಯ್ ಅವರ ಸಂಸ್ಥೆಯಿಂದ ಸಿಬ್ಬಂದಿಯನ್ನು ನಿಯೋಜಿಸಿಕೊಂಡಿದ್ದಾರೆ.
ಉಡಾನ್, ಅಗ್ಲಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ರೋಣಿತ್ ರಾಯ್ ಅವರು ತಮ್ಮದೇ ಆದ ಏಸ್ ಸೆಕ್ಯೂರಿಟಿ ಆಂಡ್ ಪ್ರೊಟೆಕ್ಷನ್ ಏಜೆನ್ಸಿ ಎಂಬ ಭದ್ರತಾ ಸಂಸ್ಥೆಯನ್ನು ಹೊಂದಿದ್ದಾರೆ. ಬಾಲಿವುಡ್‌ನ ಟಾಪ್ ನಟರಾದ ಬಿಗ್ ಬಿ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಮತ್ತಿತರರು ಕೂಡ ಇದೇ ಸಂಸ್ಥೆಯ ಭದ್ರತೆಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಸಂಸ್ಥೆಯು ಹೈಪ್ರೊಫೈಲ್ ಭದ್ರತೆಗೆ ಹೆಸರುವಾಸಿಯಾಗಿದೆ.
ಸೈಫ್ ಅವರಿಗೆ ಯಾವ ರೀತಿಯ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂಬ ಬಗ್ಗೆ ರೋಣಿತ್ ರಾಯ್ ಅವರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಕೇವಲ ಸೈಫ್ ಗೆ ಮಾತ್ರವಲ್ಲದೆ ಅವರ ಇಡೀ ಕುಟುಂಬಕ್ಕೆ ರೋಣಿತ್ ಅವರ ಸಂಸ್ಥೆ ಸಂಪೂರ್ಣ ಭದ್ರತೆ ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ. ಏಸ್ ಸೆಕ್ಯೂರಿಟಿ ಆ್ಯಂಡ್ ಪ್ರೊಟೆಕ್ಷನ್ ಅನ್ನು ಏಸ್ ಸ್ಕ್ವಾಡ್ ಎಂದೂ ಕರೆಯಲಾಗುತ್ತದೆ.

ಭದ್ರತೆ ಮತ್ತು ಪ್ರಾಪರ್ಟಿ ಮ್ಯಾನೇಜ್ಮೆಂಟ್ ಕೆಲಸವನ್ನು ಇದು ಮಾಡುತ್ತದೆ. ಹೈಪ್ರೊಫೈಲ್ ವ್ಯಕ್ತಿಗಳ ವೈಯಕ್ತಿಕ ಹಾಗೂ ವೃತ್ತಿಪರ ಹಿತಾಸಕ್ತಿಯನ್ನು ಕಾಪಾಡುವುದೇ ಇದರ ಉದ್ದೇಶವಾಗಿದೆ. ಈ ಸಂಸ್ಥೆಯಲ್ಲಿ ಅತ್ಯುನ್ನತ ತರಬೇತಿ ಪಡೆದಿರುವ, ವಿವಿಧ ಕೌಶಲ್ಯಗಳುಳ್ಳ, ಶಿಸ್ತುಬದ್ಧ ಸಿಬ್ಬಂದಿಯಿದ್ದಾರೆ. ಕಳೆದ ವಾರ ಚೂರಿ ಇರಿತಕ್ಕೊಳಗಾಗಿದ್ದ ಸೈಫ್ ಅಲಿ ಖಾನ್ ಅವರು ಈಗ ತಮ್ಮ ರಕ್ಷಣೆಗಾಗಿ ಈ ಸಂಸ್ಥೆಯ ಮೊರೆಹೋಗಿದ್ದಾರೆ.
6 ದಿನಗಳ ಕಾಲ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸೈಫ್ ಅಲಿ ಖಾನ್ ಮಂಗಳವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಕನಿಷ್ಠ ಒಂದು ವಾರ ಕಾಲ ವಿಶ್ರಾಂತಿ ಪಡೆಯುವಂತೆ ಅವರಿಗೆ ವೈದ್ಯರು ಸಲಹೆ ನೀಡಿದ್ದು, ಪ್ರಸ್ತುತ ನಟ ತಮ್ಮ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದಾರೆ.