ಮುಂಬೈ: ಬಹು ನಿರೀಕ್ಷಿತ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ (IML) T20 2025 ಫೆಬ್ರವರಿ 22ರಿಂದ ಆರಂಭಗೊಳ್ಳಲಿದೆ. ಈ ಟೂರ್ನಿಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ಉಡುಗೊರೆಯಂತೆ ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಜತೆಯಾಗಿ ಮೈದಾನಕ್ಕಿಳಿಯಲಿದ್ದಾರೆ. ದಶಕದ ಬಳಿಕ ಇದೇ ಮೊದಲ ಬಾರಿ ಜತೆಯಾಗುತ್ತಿರುವ ಈ ಇಬ್ಬರೂ, ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮಾಸ್ಟರ್ಸ್ ವಿರುದ್ಧ ಭಾರತ ಮಾಸ್ಟರ್ಸ್ ಪರ ಆಡಲಿದ್ದಾರೆ.
ಮಾರ್ಚ್ 16ರವರೆಗೆ ನಡೆಯಲಿರುವ ಈ ಟೂರ್ನಿ, ಭಾರತ-ಶ್ರೀಲಂಕಾ ಕ್ರಿಕೆಟ್ ಪೈಪೋಟಿಯನ್ನು ಮತ್ತೊಮ್ಮೆ ಸ್ಮರಿಸಲಿದೆ. ಈ ಎರಡು ತಂಡಗಳು ಇತಿಹಾಸದಲ್ಲಿ ಅನೇಕ ಸ್ಮರಣೀಯ ಪಂದ್ಯಗಳನ್ನು ಆಡಿದ್ದು, 2011ರ ವಿಶ್ವಕಪ್ ಫೈನಲ್ ಅವುಗಳಲ್ಲಿ ಪ್ರಮುಖ.
ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲೊಬ್ಬರಾದ ಸಚಿನ್ ತೆಂಡೂಲ್ಕರ್, 34,000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಮತ್ತು 100 ಶತಕಗಳ ದಾಖಲೆ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಮಾಸ್ಟರ್ಸ್ ಲೀಗ್‌ನಲ್ಲಿ ಅವರ ಭಾಗವಹಿಸುವಿಕೆ ಹಾಗೂ ಭಾರತೀಯ ಜೆರ್ಸಿಯಲ್ಲಿ ಅವರನ್ನು ನೋಡುವ ಅಪರೂಪದ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಯುವರಾಜ್ ಸಿಂಗ್ ಬಗ್ಗೆ
ಯುವರಾಜ್ ಸಿಂಗ್, 2007ರ ಟಿ20ವಿಶ್ವಕಪ್ ಮತ್ತು 2011ರ ಒಡಿಐ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ತಂಡದ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ. 400ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರ ಆಟವನ್ನು ಅಭಿಮಾನಿಗಳು ಇಂದಿಗೂ ನೆನಪಿಸುತ್ತಾರೆ.
ಶ್ರೀಲಂಕಾ ವಿರುದ್ಧದ ತಮ್ಮಆಟದ ಕುರಿತು ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿ, “ಶ್ರೀಲಂಕಾ ವಿರುದ್ಧದ ನಮ್ಮ ಪಂದ್ಯಗಳ ಹಲವು ಕ್ಷಣಗಳು ನಮ್ಮ ಮುಂದಿವೆ. ಆದರೆ 2011ರ ವಿಶ್ವಕಪ್ ಫೈನಲ್ ಅತಿ ವಿಶೇಷ. ಆ ತಂಡವು ನಮ್ಮ ಕ್ರಿಕೆಟ್ ಯಾನದ ಪ್ರಮುಖ ಭಾಗವಾಗಿರುವುದರಿಂದ ಮತ್ತೆ ಅವರ ವಿರುದ್ಧ ಆಡಲು ಸಿಕ್ಕ ಅವಕಾಶ ಅತ್ಯಂತ ವಿಶೇಷ. ಅಂತರಾಷ್ಟ್ರೀಯ ಮಾಸ್ಟರ್ಸ್ ಲೀಗ್, ಕ್ರಿಕೆಟ್ ಮೇಲಿನ ಪ್ರೇಮವನ್ನು ಮತ್ತೆ ಜೀವಂತಗೊಳಿಸುವ ಮತ್ತು ಅಭಿಮಾನಿಗಳಿಗೆ ಸಂಭ್ರಮಿಸಲು ಅವಕಾಶ ನೀಡುವ ಟೂರ್ನಿಯಾಗಿದೆ” ಎಂದು ಹೇಳಿದರು.
ಭಾರತ ಮಾಸ್ಟರ್ಸ್ ತಂಡದ ಮಾಲೀಕ ಹಾಗೂ ಕ್ರಿಕೆಟ್ ಪ್ರೇಮಿ ಕಾರ್ತಿಕ್ ಮಿಶ್ರಾ, ಈ ಟೂರ್ನಿಯ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. , “ಈ ಕ್ರಿಕೆಟ್ ದಿಗ್ಗಜರನ್ನು ಮತ್ತೆ ಒಂದುಗೂಡಿಸುವುದು ನಮ್ಮ ದೇಶದ ಕ್ರಿಕೆಟ್ ಪರಂಪರೆಯ ಆಚರಣೆಯಾಗಿದೆ. IML T20 2025 ಆ ಮಾಯೆಯನ್ನು ಮತ್ತೊಮ್ಮೆ ಮೈದಾನದಲ್ಲಿ ಪುನರಾವರ್ತಿಸಲು ಸಿದ್ಧವಾಗಿದೆ ” ಎಂದು ಹೇಳಿದರು.

ಯಾರೆಲ್ಲ ಇದ್ದಾರೆ?
ಭಾರತ ಮಾಸ್ಟರ್ಸ್ ತಂಡದಲ್ಲಿ ಇರ್ಫಾನ್ ಮತ್ತು ಯೂಸುಫ್ ಪಠಾಣ್ ಸಹೋದರರು, ಸ್ಟುವರ್ಟ್ ಬಿನ್ನಿ ಮತ್ತು ಧವಲ್ ಕುಲಕರ್ಣಿ ಮುಂತಾದ ಪ್ರಮುಖ ಆಟಗಾರರು ಕೂಡ ಆಡಲಿದ್ದಾರೆ.
ಯುವರಾಜ್ ಸಿಂಗ್ ಪೈಪೋಟಿಯ ಬಗ್ಗೆ ಮಾತನಾಡುತ್ತಾ , “ಭಾರತ-ಶ್ರೀಲಂಕಾ ಪಂದ್ಯ ಎಂದಿಗೂ ಉಲ್ಲಾಸ ಹಾಗೂ ರೋಮಾಂಚಕಾರಿ . ದಿಗ್ಗಜ ಆಟಗಾರರೊಂದಿಗೆ ಮತ್ತೊಮ್ಮೆ ಆಡಲು ಸಾಧ್ಯವಾದುದು ನನಗೆ ಸಂತೋಷದ ವಿಷಯ . ಇದು ಅಂತಾರಾಷ್ಟ್ರೀಯ ಮಾಸ್ಟರ್ಸ್ ಲೀಗ್‌ನ ಉದ್ದೇಶ” ಎಂದರು.
ಆರು ತಂಡಗಳ ನಡುವಿನ ಆಟ
IML T20 ಲೀಗ್‌ನಲ್ಲಿ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಆರು ತಂಡಗಳು ಸ್ಪರ್ಧಿಸಲಿವೆ. ನವಿ ಮುಂಬೈ, ವಡೋದರ ಮತ್ತು ರಾಯ್ಪುರದಲ್ಲಿ ಪಂದ್ಯಗಳು ನಡೆಯಲಿದ್ದು, ರಾಯ್ಪುರದಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಮಾರ್ಚ್ 16ರಂದು ಅಂತಿಮ ಪಂದ್ಯ ನಡೆಯಲಿದ್ದು, ಪ್ರಶಸ್ತಿ ವಿಜೇತ ತಂಡ ನಿರ್ಧಾರವಾಗಲಿದೆ.