ತಿರುವನಂತಪುರಂ: ಕೇರಳದ ಶಬರಿಮಲೆಗೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ತೆರಳುತ್ತಾರೆ. ಇದರಿಂದಾಗಿ ದೇವಾಲಯಕ್ಕೆ ನೂರಾರು ಕೋಟಿ ರೂ. ಸಂಗ್ರಹವಾಗುತ್ತದೆ. ಅದರಂತೆ, ಶಬರಿಮಲೆಯಲ್ಲಿಮಂಡಲ ಮಹೋತ್ಸವ ಹಾಗೂ ಮಕರ ಜ್ಯೋತಿ ಋುತುವಿನಲ್ಲಿಒಟ್ಟು 440 ಕೋಟಿ ರೂ. ಆದಾಯ ಲಭಿಸಿದೆ.
ಅದರಲ್ಲೂ, ಕಳೆದ ವರ್ಷಕ್ಕಿಂತ 86 ಕೋಟಿ ರೂ. ಆದಾಯ ಹೆಚ್ಚಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. 55 ಲಕ್ಷ ಕ್ಕೂ ಹೆಚ್ಚು ಭಕ್ತರು ಅಯ್ಯಪ್ಪ ದರ್ಶನ ಪಡೆದಿದ್ದಾರೆ. ಕಳೆದ ವರ್ಷಕ್ಕಿಂತ ಸುಮಾರು 5 ಲಕ್ಷ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಅರವಣ ಮಾರಾಟದಿಂದ 191 ಕೋಟಿ ರೂ., ಕಾಣಿಕೆಯಾಗಿ 126 ಕೋಟಿ ರೂ. ಲಭಿಸಿದೆ. ಮಂಡಲ ಮಹೋತ್ಸವಕ್ಕೆ 147 ಕೋಟಿ ರೂ. ಖರ್ಚು ಮಾಡಲಾಗಿದೆ. 15 ಸಾವಿರಕ್ಕೂ ಹೆಚ್ಚು ಸರಕಾರಿ ಅಧಿಕಾರಿಗಳ ಪ್ರಯತ್ನದ ಫಲವಾಗಿ ಈ ಬಾರಿ ಶಬರಿಮಲೆ ಯಾತ್ರೆ ದೂರಿನಿಂದ ಮುಕ್ತವಾಗಿದೆ ಎಂದು ಹೇಳಿದ್ದಾರೆ.
ಶಬರಿಮಲೆಯನ್ನು ಸಂಪೂರ್ಣವಾಗಿ ಸೌರ ವಿದ್ಯುತ್ ಗೆ ಬದಲಾಯಿಸಲು ಮಾರ್ಚ್ 31ರ ಮೊದಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಲ್ಲಿಸುವಂತೆ ಸರ್ಕಾರ ನಿರ್ದೇಶಿಸಿದೆ. ವಿಶು ಹಬ್ಬದಂದು ಶಬರಿಮಲೆಯಲ್ಲಿ ಜಾಗತಿಕ ಅಯ್ಯಪ್ಪ ಸಂಗಮ ಆಯೋಜಿಸಲಾಗುತ್ತದೆ. 50ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.