ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಬಾಗಿಲಿಗೆ ಚಿನ್ನದ ಲೇಪನ ಮಾಡಿದ ನಂತರ ಉಳಿದ ಚಿನ್ನವನ್ನು ಮದುವೆಯೊಂದಕ್ಕೆ ಬಳಸಲು ಪ್ರಾಯೋಜಕ, ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿ ಅನುಮತಿ ಕೋರಿದ್ದರು ಎಂಬ ಆಘಾತಕಾರಿ ಮಾಹಿತಿ ನ್ಯಾಯಾಲಯದ ತನಿಖೆಯಿಂದ ಬಹಿರಂಗವಾಗಿದೆ. ಈ ವಿವಾದದ ಕೇಂದ್ರಬಿಂದುವಾಗಿರುವ ಪೊಟ್ಟಿ ಅವರು 2019ರಲ್ಲೇ ಈ ಕುರಿತು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಪತ್ರ ಬರೆದಿದ್ದರು ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, 2019ರ ಡಿಸೆಂಬರ್ 9 ರಂದು ಪ್ರಾಯೋಜಕ ಉನ್ನಿಕೃಷ್ಣನ್ ಪೊಟ್ಟಿ, “ಶಬರಿಮಲೆ ಗರ್ಭಗುಡಿಯ ಮುಖ್ಯದ್ವಾರ ಮತ್ತು ದ್ವಾರಪಾಲಕ ಮೂರ್ತಿಗಳಿಗೆ ಚಿನ್ನದ ಲೇಪನ ಮಾಡಿದ ನಂತರ ನನ್ನ ಬಳಿ ಸ್ವಲ್ಪ ಚಿನ್ನ ಉಳಿದಿದೆ. ಇದನ್ನು ಟಿಡಿಬಿ ಸಹಯೋಗದೊಂದಿಗೆ, ಅಗತ್ಯವಿರುವ ಅರ್ಹ ಹೆಣ್ಣುಮಗಳ ಮದುವೆಗೆ ಬಳಸಲು ಬಯಸುತ್ತೇನೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,” ಎಂದು ಪತ್ರದಲ್ಲಿ ಕೋರಿದ್ದರು. ಈ ಪತ್ರದ ಆಧಾರದ ಮೇಲೆ, ದೇವಸ್ವಂ ಕಾರ್ಯದರ್ಶಿ ಉಳಿದ ಚಿನ್ನದ ಬಗ್ಗೆ ಸ್ಪಷ್ಟನೆ ಕೇಳಿದ್ದರು.
ಪೊಟ್ಟಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ದೇವಾಲಯದ ವಿಗ್ರಹಗಳು ಮತ್ತು ಬೆಲೆಬಾಳುವ ವಸ್ತುಗಳಿಗೆ ಚಿನ್ನದ ಲೇಪನ ಮಾಡಲು ಟಿಡಿಬಿಯಿಂದ ಅನುಮೋದನೆ ಪಡೆದಿದ್ದರು. ಟಿಡಿಬಿ 42.8 ಕೆ.ಜಿ ತೂಕದ ವಸ್ತುಗಳನ್ನು ಪೊಟ್ಟಿ ಅವರ ಚೆನ್ನೈ ಮೂಲದ ಕಂಪನಿ ‘ಸ್ಮಾರ್ಟ್ ಕ್ರಿಯೇಷನ್ಸ್’ಗೆ ಹಸ್ತಾಂತರಿಸಿತ್ತು. ಆದರೆ, ಚಿನ್ನದ ಲೇಪನದ ನಂತರ ದೇವಾಲಯಕ್ಕೆ ಹಿಂತಿರುಗಿಸಿದಾಗ, ತಾಮ್ರದ ಫಲಕಗಳ ತೂಕವು 38.258 ಕೆ.ಜಿಗೆ ಇಳಿದಿತ್ತು. ಇದರ ಹೊರತಾಗಿಯೂ, ಟಿಡಿಬಿ ಈ ವರ್ಷವೂ ಪೊಟ್ಟಿ ಅವರಿಗೇ ಚಿನ್ನದ ಲೇಪನ ಯೋಜನೆಯನ್ನು ವಹಿಸಿಕೊಟ್ಟಿತ್ತು.

“ಹೈಕೋರ್ಟ್ ತರಾಟೆ, ಎಸ್‌ಐಟಿ ರಚನೆ”
ದುರಸ್ತಿಗಾಗಿ ದೇವಾಲಯದಿಂದ ಹೊರತೆಗೆದ ಫಲಕಗಳನ್ನು ತಕ್ಷಣವೇ ಹಿಂತಿರುಗಿಸುವಂತೆ ಕೇರಳ ಹೈಕೋರ್ಟ್ ಆದೇಶಿಸಿದ ನಂತರ ಈ ವಿವಾದ ಭುಗಿಲೆದ್ದಿದೆ. ದೇವಸ್ವಂ ಕೈಪಿಡಿಯನ್ನು ಉಲ್ಲಂಘಿಸಿ ಮತ್ತು ನ್ಯಾಯಾಲಯದಿಂದ ನೇಮಿಸಲ್ಪಟ್ಟ ಶಬರಿಮಲೆ ವಿಶೇಷ ಆಯುಕ್ತರಿಗೆ ಮಾಹಿತಿ ನೀಡದೇ ಈ ಪ್ರಕ್ರಿಯೆ ನಡೆಸಿದ್ದಕ್ಕಾಗಿ ಟಿಡಿಬಿಯನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ದೇವಸ್ವಂ ಅಧಿಕಾರಿಗಳು ಉನ್ನಿಕೃಷ್ಣನ್ ಪೊಟ್ಟಿ ಅವರೊಂದಿಗೆ ಸೇರಿ ದೇವಾಲಯದ ಆಸ್ತಿಯ ಪಾವಿತ್ರ್ಯತೆ ಮತ್ತು ಭಕ್ತರ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಚಿನ್ನ ಲೇಪಿತ ತಾಮ್ರದ ಫಲಕಗಳ ತೂಕದಲ್ಲಿನ ಇಳಿಕೆಗೆ ಸಂಬಂಧಿಸಿದ ಅಕ್ರಮಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ನ್ಯಾಯಾಲಯ ಆದೇಶಿಸಿದೆ. ಮಾಜಿ ಪೊಲೀಸ್ ವರಿಷ್ಠಾಧಿಕಾರಿ ಎಸ್. ಶಶಿಧರನ್ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಕ್ರೈಂ ಬ್ರಾಂಚ್ ಮುಖ್ಯಸ್ಥ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಚ್. ವೆಂಕಟೇಶ್ ಮೇಲ್ವಿಚಾರಣೆ ನಡೆಸಲಿದ್ದಾರೆ.
“ಕೇರಳ ಸರ್ಕಾರದ ವಿರುದ್ಧ ಶಶಿ ತರೂರ್ ಕಿಡಿ”
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಚಿನ್ನ ಕಳವು ಆರೋಪದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಹೊಣೆಗಾರಿಕೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ. “ಕೇರಳದಲ್ಲಿ ನಡೆಯುತ್ತಿರುವ ಘಟನೆಗಳಲ್ಲಿ ಏನೋ ಅಕ್ರಮವಿದೆ ಎಂಬುದು ಎಲ್ಲರಿಗೂ ಅರಿವಾಗಿದೆ. ಹಲವು ಕಿಲೋ ಚಿನ್ನವನ್ನು ಕಬಳಿಸಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿರುವುದು ಸಂತೋಷದ ವಿಷಯ. ಆದರೆ, ಸಾರ್ವಜನಿಕರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈಗಿನ ಎಲ್‌ಡಿಎಫ್ ಸರ್ಕಾರದ ಅವಧಿಯಲ್ಲಿ ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ಇಂಥ ಅಕ್ರಮಗಳು ನಡೆದಿದೆ ಎಂದು ಎನಿಸುತ್ತಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.