ತಿರುವನಂತಪುರ : ಶಬರಿಮಲೆ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಸ್ಮಾರ್ಟ್ ಕ್ರಿಯೇಷನ್ಸ್‌ನ ಸಿಇಒ ಪಂಕಜ್ ಭಂಡಾರಿ ಮತ್ತು ಬಳ್ಳಾರಿಯಲ್ಲಿ ನೆಲೆಸಿರುವ ಆಭರಣ ವ್ಯಾಪಾರಿ ಗೋವರ್ಧನ್ ಅವರನ್ನು ಬಂಧಿಸಿದೆ.
ಪಂಕಜ್ ಭಂಡಾರಿ ದ್ವಾರಪಾಲಕ ಮೂರ್ತಿಗಳನ್ನು ಕೆಲಸಕ್ಕಾಗಿ ತೆಗೆದುಕೊಂಡ ಹೋದ ನಂತರ ಅವುಗಳ ತೂಕ ಕಡಿಮೆಯಾಗಿದೆ. ಮೂರ್ತಿಯಿಂದ ತೆಗೆದ ಚಿನ್ನವನ್ನು ಗೋವರ್ಧನ್ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಎಸ್‌ಐಟಿ ಆರೋಪಿಸಿದೆ.
ಅಕ್ಟೋಬರ್ 28ರಂದು ಆರಂಭಿಕ ತನಿಖೆಯ ಭಾಗವಾಗಿ ಎಸ್‌ಐಟಿ ಗೋವರ್ಧನ್ ಅವರ ಆಭರಣ ಅಂಗಡಿಯ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಈ ಹಗರಣದಲ್ಲಿ ತನ್ನ ಪಾತ್ರವಿಲ್ಲ. ಚಿನ್ನದ ಹೊದಿಕೆಯ ಬಾಗಿಲಿಗೆ ದೇಣಿಗೆಯಾಗಿ ಹಣ ನೀಡಿದ್ದೇನೆ ಎಂದು ಹೇಳಿಕೊಂಡಿದ್ದರು.
ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ ಅವರು 2019ರಲ್ಲಿ ದೇವಾಲಯಕ್ಕೆ ಚಿನ್ನದ ಲೇಪಿತ ಬಾಗಿಲನ್ನು ಸಮರ್ಪಣೆ ಮಾಡುವ ಉದ್ದೇಶದಿಂದ ನನ್ನನ್ನು ಸಂಪರ್ಕಿಸಿದ್ದರು. ಬಳ್ಳಾರಿಯಲ್ಲಿ ನಿರ್ಮಿಸಲಾದ ಹೊಸ ಬಾಗಿಲನ್ನು ಶಬರಿಮಲೆ ದೇವಸ್ಥಾನಕ್ಕೆ ಸಾಗಿಸುವ ಮೊದಲು ಅವರ ಆಭರಣ ಅಂಗಡಿಯಲ್ಲಿ ಪ್ರದರ್ಶಿಸಲಾಗಿತ್ತು ಎಂದು ಗೋವರ್ಧನ್ ತಿಳಿಸಿದ್ದರು.
ಇಬ್ಬರ ಬಂಧನದೊಂದಿಗೆ ಈ ವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಡಿ.17 ರಂದು ತನಿಖಾ ತಂಡವು ಶಬರಿಮಲೆಯ ಮಾಜಿ ಆಡಳಿತ ಅಧಿಕಾರಿ ಶ್ರೀಕುಮಾರ್ ಅವರನ್ನು ಬಂಧಿಸಿತ್ತು. ನವೆಂಬರ್‌ನಲ್ಲಿ ಚಿನ್ನದ ಕಳ್ಳತನದಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಎಸ್‌ಐಟಿ ಮಾಜಿ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಮತ್ತು ಸಿಪಿಎಂ ನಾಯಕ ಎ ಪದ್ಮಕುಮಾರ್ ಅವರನ್ನು ಬಂಧನ ಮಾಡಿತ್ತು. ಪ್ರಕರಣದಲ್ಲಿ ಅವರನ್ನು ಎಂಟನೇ ಆರೋಪಿ ಎಂದು ಹೆಸರಿಸಲಾಗಿದೆ.
ಪ್ರಕರಣದ ಹಿನ್ನೆಲೆ |
ಇತ್ತೀಚೆಗಷ್ಟೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ದ್ವಾರಪಾಲಕ ವಿಗ್ರಹಕ್ಕೆ ಹೊದಿಸಿದ 42.8 ಕೆಜಿ ತೂಕದ ಕವಚದಲ್ಲಿ 4.5 ಕೆಜಿ ಚಿನ್ನ ನಾಪತ್ತೆಯಾಗಿದೆ. ಹಳೆಯ ತಾಮ್ರ ಮತ್ತು ಚಿನ್ನದ ಲೇಪನ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಆಯುಕ್ತರು ಆರೋಪಿಸಿದ್ದರು. 2019ರಲ್ಲಿ ದೇವರ ಮೂರ್ತಿಗಳಿಗೆ ಪುನರ್‌ಲೇಪನ ಮಾಡಲಾಗಿತ್ತು. ಈ ವೇಳೆ ತಾಮ್ರದ ಮೂರ್ತಿಗೆ ಹೊದಿಸಿದ್ದ ಚಿನ್ನದ ಕವಚದಲ್ಲಿ 4.5 ಕೆಜಿ ಚಿನ್ನ ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಧರ್ಮನಿಂದನೆ ಆರೋಪ : ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿ ಜೀವಂತವಾಗಿ ಸುಟ್ಟ ಪಾಪಿಗಳು



















