ಬೆಂಗಳೂರು: ಮಾನವೀಯತೆಯನ್ನೇ ಮುಖ್ಯ ಹೂರಣವಾಗಿಸಿಕೊಂಡಿರುವ ಸಾಕ್ಷ್ಯ ಚಿತ್ರಕ್ಕೆ ಸಂಸದ ಡಾ. ಮಂಜುನಾಥ್, ನಟಿ ಪ್ರಿಯಾಂಕ ಉಪೇಂದ್ರ ಮತ್ತು ಐಪಿಎಸ್ ರವಿ ಸಾಥ್ ನೀಡಿದ್ದಾರೆ.
ವೈದ್ಯಕೀಯ ಲೋಕದಲ್ಲಿ ಆಗಾಗ ಅಚ್ಚರಿಗಳು ನಡೆಯುತ್ತವೆ. ಇಂತಹ ಘಟನೆಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ಎ. ಪರಮೇಶ್ ” ಮಿಸ್ಲೆ” ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದು ಮನಮುಟ್ಡುವ ರೀತಿ ಕಟ್ಟಿ ಕೊಟ್ಟಿದ್ದಾರೆ.
ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದ್ದ ಕಾಯಿಲೆಯಿಂದ ಡಾಕ್ಟರ್ ಹೇಗೆ ರೋಗಿಯನ್ನು ಪಾರು ಮಾಡಿದರು ಎಂಬುವುದನ್ನು ಈ ಚಿತ್ರ ತಿಳಿಸುತ್ತದೆ. ಆಂಧ್ರ ಪ್ರದೇಶದ ಅನಂತಪುರದ ರೋಗಿಯೊಬ್ಬರು ಕೋವಿಡ್ ಸೋಂಕು ತಗುಲಿ ಅದರಿಂದ ಪಾರಾಗುವುದರೊಳಗೆ ಇನ್ನೊಂದು ಕಾಯಿಲೆಗೆ ತುತ್ತಾಗಿದ್ದರು. ಆಗ ಜೀವನ್ಮರಣದ ಹೋರಾಟ ಮಾಡುವಂತಾಗಿತ್ತು. ಈ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಕುಟುಂಬವು ಎದುರಿಸಿದ ಸಮಸ್ಯೆಗಳು ರೋಗಿಯ ಪತ್ನಿ ಮತ್ತು ಸಹೋದರ ಬೆನ್ನಿಗೆ ನಿಂತ ಮನ ಮಿಡಿಯುವ ನೈಜ ಘಟನೆಯನ್ನು 48 ನಿಮಿಷಗಳ ಅವಧಿಯಲ್ಲಿ ಚಿತ್ರೀಕರಿಸಿ ತೋರಿಸಲಾಗಿದೆ.
ಮೂಳೆ ರೋಗ ತಜ್ಞರಾದ ಡಾ. ಗೋಪಾಲ ಕೃಷ್ಣ ಅವರು ವೃತ್ತಿಯಲ್ಲಿ ರಿಸ್ಕ್ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆಂಧ್ರಪ್ರದೇಶದ ರೋಗಿಗೆ ಪುನರ್ ಜನ್ಮ ನೀಡಿದ ಕಥೆಯನ್ನು “ಮಿಸ್ಲೆ ” ಎಂಬ ಸಾಕ್ಷ್ಯಚಿತ್ರದ ಮೂಲಕ ಚಿತ್ರೀಕರಿಸಲಾಗಿದೆ. ಡಾಕ್ಟರ್ ಆಗಿರುವ ಸುಜಾತ ಎಂಬುವರು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಪತಿಯ ಸಾಧನೆಯನ್ನು ಸಮಾಜಕ್ಕೆ ಜಾಗೃತಿ ಮುಡಿಸಲು ಈ ರೀತಿ ಕಥೆ ಹೆಣೆದಿದ್ದಾರೆ. ಡಾ.ಸುಜಾತಕೃಷ್ಣ ಪ್ರೊಡಕ್ಷನ್ ಹೌಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಸಾಕ್ಷ್ಯಚಿತ್ರಕ್ಕೆ ಎ.ಪರಮೇಶ್ ನಿರ್ದೇಶನ ಮಾಡಿದ್ದಾರೆ.
ಈ ವೇಳೆ ಚಿಕಿತ್ಸೆಗೆ ಒಳಗಾಗಿ ಪುನರ್ ಜನ್ಮ ಪಡೆದ ರೋಗಿ, ಅವರ ಪತ್ನಿ ಮತ್ತು ಸಹೋದರ ಕೂಡ ಆಗಮಿಸಿದ್ದು ವಿಶೇಷವಾಗಿತ್ತು. ಸಾಕ್ಷ್ಯಚಿತ್ರ ನೈಜವಾಗಿ ಬರಲಿ ಎನ್ನುವ ಉದ್ದೇಶದಿಂದ ರೋಗಿಯ ಮಾತೃ ಭಾಷೆ ತೆಲುಗು ಮತ್ತು ವೈಜ್ಞಾನಿಕ ವಿವರಣೆಗಳಿಗೆ ಇಂಗ್ಲಿಷ್ ಭಾಷೆಯ ಉಪಯೋಗ ಮಾಡಲಾಗಿದೆ. ಡಾಕ್ಯುಮೆಂಟರಿ ಚಿತ್ರದಲ್ಲಿ ನಿಜ ಪಾತ್ರಕ್ಕೆ ಜೀವ ತುಂಬಲು, ನಟ ಮಹೇಶ್ ರಾಜ್, ಶ್ರೀಪರಿಣಿತಿ ಮತ್ತು ನಾಗರಾಜ್ ಶೆಟ್ಟಿ ಅಭಿನಯಿಸಿದ್ದಾರೆ.