ರಾಯ್ಪುರ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಇಂದು ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಆ ಮೂಲಕ ಅವರು ತಮ್ಮ ಒಡಿಐ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದ್ದಾರೆ. ಮೊದಲನೇ ಏಕದಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಗಾಯಕ್ವಾಡ್, ಎರಡನೇ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ಶ್ರೇಷ್ಠ ಇನಿಂಗ್ಸ್ ಆಡಿದ್ದಾರೆ.
ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ ಒಂದಂಕಿಗೆ ಸುಸ್ತಾಗಿದ್ದ ರುತುರಾಜ್ , ಇದೀಗ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಟೀಂ ಇಂಡಿಯಾ ಪರ ಇದುವರೆಗೆ 8 ಏಕದಿನ ಪಂದ್ಯಗಳನ್ನಾಡಿರುವ ರುತುರಾಜ್ಗೆ ಇದು ಚೊಚ್ಚಲ ಏಕದಿನ ಶತಕವಾಗಿರುವುದು ಇನ್ನಷ್ಟು ವಿಶೇಷವಾಗಿದೆ. ಎಂದಿನಂತೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರುತುರಾಜ್ ಆರಂಭದಿಂದಲೂ ವೇಗವಾಗಿ ಬ್ಯಾಟ್ ಬೀಸಿದರು. 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು 77 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕದ ಗಡಿ ದಾಟಿದರು.
ಇದನ್ನೂ ಓದಿ : ಸಂಚಾರ್ ಸಾಥಿ ಆ್ಯಪ್ ಅಳವಡಿಕೆ ಕಡ್ಡಾಯವಲ್ಲ | ಆದೇಶ ಹಿಂಪಡೆದ ಕೇಂದ್ರ ಸರ್ಕಾರ



















