ಮಾಸ್ಕೋ: ಅಮೆರಿಕದ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಿಡುಗಡೆಯಾದ ಹೊಸ ಕಡತಗಳಲ್ಲಿ ಹೆಸರಿಸಲ್ಪಟ್ಟಿದ್ದ ರಷ್ಯಾದ ಪ್ರಭಾವಿ ಉದ್ಯಮಿ ಉಮರ್ ಜಬ್ರೈಲೋವ್ (67) ಮಾಸ್ಕೋದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸೋಮವಾರ ಮುಂಜಾನೆ ಮಾಸ್ಕೋದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರ ಶವ ಪತ್ತೆಯಾಗಿದೆ. ಅವರ ತಲೆಗೆ ಗುಂಡು ತಗುಲಿದ್ದು, ಶವದ ಪಕ್ಕದಲ್ಲೇ ಪಿಸ್ತೂಲ್ ಪತ್ತೆಯಾಗಿರುವುದರಿಂದ ಇದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಎಪ್‌ಸ್ಟೀನ್ ಆಪ್ತೆ ಗಿಸ್ಲೇನ್ ಮ್ಯಾಕ್ಸ್‌ವೆಲ್ ಜೊತೆಗಿನ ನಂಟು
ಚೆಚನ್ ಮೂಲದ ಉಮರ್ ಜಬ್ರೈಲೋವ್ ಅವರು ಈ ಹಿಂದೆ ಜೆಫ್ರಿ ಎಪ್‌ಸ್ಟೀನ್‌ನ ಮಾಜಿ ಗೆಳತಿ ಮತ್ತು ಲೈಂಗಿಕ ಹಗರಣದ ಅಪರಾಧಿ ಗಿಸ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ತಮ್ಮ “ಸಂಗಾತಿ” (Soulmate) ಎಂದು ಕರೆದಿದ್ದರು. 2001ರ ಅವಧಿಯ ಇಮೇಲ್ ಸಂಭಾಷಣೆಗಳ ಪ್ರಕಾರ, ಮ್ಯಾಕ್ಸ್‌ವೆಲ್ ಮತ್ತು ಎಪ್‌ಸ್ಟೀನ್ ಅವರು ಮಾಸ್ಕೋಗೆ ಭೇಟಿ ನೀಡಿದ್ದಾಗ ಜಬ್ರೈಲೋವ್ ಅವರೇ ಆತಿಥ್ಯದ ವ್ಯವಸ್ಥೆಗಳನ್ನು ಮಾಡಿದ್ದರು ಎನ್ನಲಾಗಿದೆ. 2022ರಲ್ಲಿ ಮ್ಯಾಕ್ಸ್‌ವೆಲ್ ಶಿಕ್ಷೆಗೆ ಗುರಿಯಾದಾಗ ಜಬ್ರೈಲೋವ್ ಬಹಿರಂಗವಾಗಿ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ಎಪ್‌ಸ್ಟೀನ್ ನಡೆಸುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ತಮಗೆ ಅರಿವಿರಲಿಲ್ಲ ಎಂದು ಅವರು ಈ ಹಿಂದೆ ಸಮರ್ಥಿಸಿಕೊಂಡಿದ್ದರು.
ಹೊಸ ಕಡತಗಳ ಬಿಡುಗಡೆ, ತನಿಖೆಯ ಒತ್ತಡ
ಕಳೆದ ಫೆಬ್ರವರಿಯಲ್ಲಿ ಅಮೆರಿಕದ ನ್ಯಾಯಾಂಗ ಇಲಾಖೆಯು ಎಪ್‌ಸ್ಟೀನ್ ಹಗರಣಕ್ಕೆ ಸಂಬಂಧಿಸಿದ 300ಕ್ಕೂ ಹೆಚ್ಚು ಪ್ರಭಾವಿಗಳ ಹೆಸರಿರುವ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್, ಬಿಲ್ ಕ್ಲಿಂಟನ್ ಮತ್ತು ಬಿಲ್ ಗೇಟ್ಸ್ ಅವರಂತಹ ದಿಗ್ಗಜರ ಜೊತೆಗೆ ಉಮರ್ ಜಬ್ರೈಲೋವ್ ಅವರ ಹೆಸರೂ ಇತ್ತು. ಈ ಕಡತಗಳು ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಜಬ್ರೈಲೋವ್ ಅವರ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
ಉದ್ಯಮ ರಂಗದ ಪ್ರಭಾವಿ
ಜಬ್ರೈಲೋವ್ ರಷ್ಯಾದಲ್ಲಿ ಕೇವಲ ಉದ್ಯಮಿಯಾಗಿರದೆ, ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. 2004 ರಿಂದ 2009 ರವರೆಗೆ ರಷ್ಯಾದ ಫೆಡರೇಷನ್ ಕೌನ್ಸಿಲ್‌ನಲ್ಲಿ ಚೆಚನ್ಯಾವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲದೆ, 2000ನೇ ಇಸವಿಯಲ್ಲಿ ವ್ಲಾಡಿಮಿರ್ ಪುಟಿನ್ ವಿರುದ್ಧ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಮಾಸ್ಕೋದ ಪ್ರತಿಷ್ಠಿತ ರಾಡಿಸನ್ ಸ್ಲಾವ್ಯಾನ್ಸ್ಕಾಯಾ ಹೋಟೆಲ್ ಸೇರಿದಂತೆ ಹಲವು ಉದ್ಯಮಗಳ ಒಡೆಯನಾಗಿದ್ದ ಇವರ ಸಾವು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಇರಾನ್ ಕ್ಷಿಪಣಿ ಬತ್ತಳಿಕೆಯ ಹಿಂದೆ ಚೀನಾ ಹಸ್ತ? ಮಧ್ಯಪ್ರಾಚ್ಯದ ಸಂಘರ್ಷದ ಹಿಂದಿದೆಯೇ ಡ್ರ್ಯಾಗನ್ ‘ಗುಪ್ತ’ ಶಕ್ತಿ?



















