ನವದೆಹಲಿ : ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಇಂದು (ಶುಕ್ರವಾರ) ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ ಮತ್ತು ಮೂರು ಸೇನಾಪಡೆಗಳ ಗೌರವ ನೀಡಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ವ್ಲಾಡಿಮಿರ್ ಪುಟಿನ್ ಪರಸ್ಪರ ತಮ್ಮ ದೇಶದ ಗಣ್ಯರಿಗೆ ಪರಿಚಯಿಸಿಕೊಂಡ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ದೆಹಲಿ ಲೆಫ್ಟಿನೆಂಟ್ ಕಮಿಷನರ್ ವಿ.ಕೆ.ಸಕ್ಸೇನಾ, ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಇದಾದ ನಂತರ ಪುಟಿನ್ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿಗೆ ತೆರಳಿ ಪುಷ್ಪಗುಚ್ಛ ಅರ್ಪಿಸಿ, ನಮನ ಸಲ್ಲಿಸಿದರು. ಬಳಿಕ ರಾಜ್‌ಘಾಟ್‌ನಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು. ರಷ್ಯಾಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಇದ್ದರು.

ಕಳೆದ ನಾಲ್ಕು ವರ್ಷಗಳಲ್ಲಿ ಪುಟಿನ್ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಇಂದು ರಷ್ಯಾಧ್ಯಕ್ಷರು ಪ್ರಧಾನಿ ಮೋದಿ ಅವರೊಂದಿಗೆ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನರೇಂದ್ರ ಮೋದಿ ಮತ್ತು ವ್ಲಾಡಿಮಿರ್ ಪುಟಿನ್ ಇಂದು ದ್ವಿಪಕ್ಷೀಯ ಮಾತುಕತೆಗಾಗಿ ಮತ್ತೊಮ್ಮೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ರಷ್ಯಾ ರಕ್ಷಣಾ ಸಚಿವ ಆಂಡ್ರೆ ಬೆಲೌಸೊವ್ ಮತ್ತು ಕ್ರೆಮ್ಲಿನ್ ಸಹಾಯಕ ಡಿಮಿಟ್ರಿ ಪೆಸ್ಕೋವ್ ಇವರೊಂದಿಗೆ ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ : ದೊಡ್ಡಬಳ್ಳಾಪುರ | ಆಟೋ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ



















