ಮಾಸ್ಕೊ: ಹತ್ರಾಸ್ ಕಾಲು ತುಳಿತದ ಪ್ರಕರಣದಲ್ಲಿ ಸುಮಾರು 116ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿರುವ ಘಟನೆ ಇಡೀ ದೇಶವನ್ನು ನೋವಿನ ಮಡುವಿನಲ್ಲಿ ದೂಡಿದೆ. ಈ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಪುಟಿನ್ ಸಂದೇಶ ಕಳುಹಿಸಿದ್ದು, ಉತ್ತರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತದ ಬಗ್ಗೆ ಅತ್ಯಂತ ಪ್ರಾಮಾಣಿಕ ಸಂತಾಪವನ್ನು ದಯವಿಟ್ಟು ಸ್ವೀಕರಿಸಿ. ದಯವಿಟ್ಟು ಮೃತರ ಹತ್ತಿರದ ಮತ್ತು ಆತ್ಮೀಯರಿಗೆ ಸಹಾನುಭೂತಿ ಮತ್ತು ಬೆಂಬಲದ ಮಾತುಗಳನ್ನು ಹೇಳೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ ಎಂದು ರಷ್ಯಾ ಅಧ್ಯಕ್ಷರು ತಿಳಿಸಿದ್ದಾರೆ.

ಧಾರ್ಮಿಕ ಬೋಧಕ ಭೋಲೆ ಬಾಬಾ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವಾದ ‘ಸತ್ಸಂಗ’ಕ್ಕಾಗಿ ಹತ್ರಾಸ್ ಜಿಲ್ಲೆಯ ಸಿಕಂದ್ರ ರಾವು ಪ್ರದೇಶದ ರಾತಿ ಭಾನ್‌ಪುರ್ ಗ್ರಾಮದಲ್ಲಿ ವಿಶೇಷವಾಗಿ ಹಾಕಲಾದ ಟೆಂಟ್‌ನಲ್ಲಿ ಮಂಗಳವಾರ ಸಾವಿರಾರು ಜನರು ಜಮಾಯಿಸಿದಾಗ ಕಾಲ್ತುಳಿತ ಉಂಟಾಗಿ ದೊಡ್ಡ ಅನಾಹುತವೇ ಸಂಭವಿಸಿದೆ.
ಭಾರೀ ಜನಸಂದಣಿ, ಹೊರಗೆ ಹೋಗಲು ಜಾಗ ಇಲ್ಲದೇ ಇರುವುದು, ಕೆಟ್ಟ ಹವಾಮಾನ ಮತ್ತು ಇತರ ಅಂಶಗಳು ಹೆಚ್ಚಿನ ಸಾವಿನ ಸಂಖ್ಯೆಗೆ ಕಾರಣವಾಗಿರಬಹುದು. ರ್ಯಕ್ರಮ ಮುಗಿಸಿ ಸತ್ಸಂಗದ ಪ್ರಚಾರಕರು ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಹಲವಾರು ಜನರು ದೇವಮಾನವನ ಕಾಲಿಗೆ ಬೀಳಲು ಅವನ ಕಡೆಗೆ ಧಾವಿಸಿದರು, ಇದರಿಂದಾಗಿ ಕಾಲ್ತುಳಿತವಾಯಿತು ಎಂದು ಕೂಡ ಕೆಲವರು ಹೇಳಿದ್ದಾರೆ.

ಸದ್ಯ ಈ ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. “ನಾವು ಎಡಿಜಿ ಆಗ್ರಾ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದೇವೆ. ಇದು ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿ ಎಂದು ಸಿಎಂ ಯೋಗಿ ಹೇಳಿದ್ದಾರೆ.