ಬೆಂಗಳೂರು: ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರವು ಬೆಳೆದು ನಿಂತಿದೆ. ಅದರಲ್ಲೂ, ಡ್ರೋನ್ ತಂತ್ರಜ್ಞಾನವು ದಿನೇದಿನೆ ಹೊಸ ಆಯಾಮ ಪಡೆಯುತ್ತಿದೆ. ಕೃಷಿಯಲ್ಲೂ ಡ್ರೋನ್ ಗಳನ್ನು ಬಳಸಲಾಗುತ್ತಿದೆ. ಹೀಗೆ ಕೃಷಿಯಲ್ಲಿ ಡ್ರೋನ್ ಗಳ ಬಳಕೆಯನ್ನು ಹೆಚ್ಚಿಸಲು, ಕೃಷಿಯನ್ನು ಆಧುನೀಕರಣಗೊಳಿಸಲು ಹಾಗೂ ಗ್ರಾಮೀಣ ಮಹಿಳೆಯರು ಕೂಡ ಸ್ವಾವಲಂಬಿ ಜೀವನ ಸಾಗಿಸಲು ಕೇಂದ್ರ ಸರ್ಕಾರವು 2023ರಲ್ಲಿ ಡ್ರೋನ್ ದೀದಿ ಯೋಜನೆಯನ್ನು ಜಾರಿಗೆ ತಂದಿದ. ಇದರ ಅನ್ವಯ ಗ್ರಾಮೀಣ ಮಹಿಳೆಯರು ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಡ್ರೋನ್ ದೀದಿ ಯೋಜನೆಯು ಮಹಿಳಾ ನೇತೃತ್ವದ ಸ್ವ-ಸಹಾಯ ಗುಂಪುಗಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದೆ. ಸ್ವಸಹಾಯ ಸಂಘಗಳು ನಂತರ ರೈತರಿಗೆ ದ್ರವ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸುವಂತಹ ಕೃಷಿ ಸೇವೆಗಳನ್ನು ಒದಗಿಸಲು ಡ್ರೋನ್ ಗಳನ್ನು ಬಳಸುತ್ತವೆ. 1,261 ಕೋಟಿ ರೂ.ಗಳ ವೆಚ್ಚದಲ್ಲಿ, 2024-25 ರಿಂದ 2025-2026 ರವರೆಗೆ 14,500 ಆಯ್ದ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಡ್ರೋನ್ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸುವ ಗುರಿ ಹೊಂದಿದೆ.
ಬೆಳೆಗಳನ್ನು ಮೇಲ್ವಿಚಾರಣೆ ಮಾಡಲು, ಕೀಟನಾಶಕಗಳನ್ನು ಅನ್ವಯಿಸಲು ಮತ್ತು ಇತರ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಬಳಸಲು ಮಹಿಳೆಯರು ಕೃಷಿಯಲ್ಲಿ ಡ್ರೋನ್ ಗಳನ್ನು ಬಳಸಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಇದು ಮಹಿಳೆಯರನ್ನು ಗ್ರಾಮೀಣ ಆರ್ಥಿಕತೆಯ ಕೇಂದ್ರಬಿಂದುವನ್ನಾಗಿ ಮಾಡುತ್ತದೆ. ಹೊಸ ಕೃಷಿ ಕ್ರಾಂತಿಯನ್ನು ಮುನ್ನಡೆಸುತ್ತದೆ.
ಮಹಿಳೆಯರಿಗೆ ಏನು ಉಪಯೋಗ?
ಡ್ರೋನ್ ದೀದಿ ಯೋಜನೆ ಅನ್ವಯ ಸುಮಾರು 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಸುಸ್ಥಿರ ವ್ಯಾಪಾರ ಮತ್ತು ಜೀವನೋಪಾಯದ ಬೆಂಬಲ ಒದಗಿಸುತ್ತವೆ. ಅವರು ವರ್ಷಕ್ಕೆ ಕನಿಷ್ಠ ಒಂದು ಲಕ್ಷ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಡ್ರೋನ್ ವೆಚ್ಚದ 80% ಅನ್ನು ಅಥವಾ ಗರಿಷ್ಠ 8 ಲಕ್ಷ ರೂಪಾಯಿಯನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಉಳಿದ ಮೊತ್ತವನ್ನು ರಾಷ್ಟ್ರೀಯ ಕೃಷಿ ಮೂಲಸೌಕರ್ಯ ಹಣಕಾಸು ಸೌಲಭ್ಯ ಮೂಲಕ ಸಾಲದ ಮೇಲೆ 3% ಬಡ್ಡಿ ರಿಯಾಯಿತಿ ನಿಬಂಧನೆಯೊಂದಿಗೆ ಸಂಗ್ರಹಿಸಬಹುದು.
ಯೋಜನೆಗೆ ಯಾರೆಲ್ಲ ಅರ್ಹರು?
ಪ್ರಗತಿಪರ ಮಹಿಳಾ ಸ್ವಸಹಾಯ ಗುಂಪುಗಳು, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳಾ ಸ್ವಸಹಾಯ ಗುಂಪುಗಳು. ಸ್ವ-ಸಹಾಯ ಗುಂಪುಗಳ ಅರ್ಹ ಮಹಿಳೆಯರು ಯೋಜನೆಗೆ ಅರ್ಹರಾಗಿದ್ದಾರೆ. 18 ರಿಂದ 45 ವರ್ಷದೊಳಗಿನ ಮಹಿಳೆಯರು ನಮೋ ಡ್ರೋನ್ ದೀದಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯೋಜನೆಗೆ ಅರ್ಜಿ ಸಲ್ಲಿಸಲು ಸದ್ಯಕ್ಕೆ ಯಾವುದೇ ಆನ್ ಲೈನ್ ಪೋರ್ಟಲ್ ಇಲ್ಲ. ಹಾಗಾಗಿ, ಮಹಿಳೆಯರು ತಮ್ಮ ಸ್ಥಳೀಯ ಸ್ವ-ಸಹಾಯ ಗುಂಪಿನ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು, ಸ್ಥಳೀಯ ಕೃಷಿ ಕಚೇರಿ ಅಥವಾ ಸ್ವ-ಸಹಾಯ ಗುಂಪಿನ ನಾಯಕತ್ವವನ್ನು ಸಂಪರ್ಕಿಸಬೇಕು.



















