ನವದೆಹಲಿ: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಇಂಡಿಗೋ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟಿನ ಕುರಿತು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿದಿದ್ದಾರೆ. ಸರ್ಕಾರ ರೂಪಿಸುವ ನಿಯಮಗಳು ಮತ್ತು ನಿಬಂಧನೆಗಳು ಭಾರತೀಯ ನಾಗರಿಕರಿಗೆ ಯಾವುದೇ ರೀತಿಯ ಸಂಕಷ್ಟವನ್ನು ತಂದೊಡ್ಡದಂತೆ ನೋಡಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಬುಧವಾರ ನಡೆದ ಎನ್‌ಡಿಎ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, ನಿಯಮಗಳು ವ್ಯವಸ್ಥೆಯನ್ನು ಸುಧಾರಿಸಲು ಇರಬೇಕೇ ಹೊರತು, ಸಾರ್ವಜನಿಕರಿಗೆ ಕಿರುಕುಳ ನೀಡಲು ಅಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಪ್ರಧಾನಿಯವರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ನಾಗರಿಕ ಎಂಬ ಒಂದೇ ಕಾರಣಕ್ಕಾಗಿ ಯಾರೂ ಸರ್ಕಾರದ ನಿಯಮಗಳಿಂದ ತೊಂದರೆ ಅನುಭವಿಸಬಾರದು ಎಂಬುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಇಂಡಿಗೋ ಸಂಸ್ಥೆಯ ಅವ್ಯವಸ್ಥೆಯಿಂದ ಲಕ್ಷಾಂತರ ಪ್ರಯಾಣಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಮಾತುಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.
ಪೈಲಟ್‌ಗಳ ಆಯಾಸ ಮತ್ತು ಕೆಲಸದೊತ್ತಡ ನಿರ್ವಹಣೆಗೆ ಸಂಬಂಧಿಸಿದಂತೆ ಜಾರಿಗೊಳಿಸಲಾದ ಹೊಸ ಕಠಿಣ ನಿಯಮಗಳನ್ನು ಪಾಲಿಸಲು ಇಂಡಿಗೋ ವಿಫಲವಾದ ಪರಿಣಾಮ, ಕಳೆದ ಒಂದು ವಾರದಲ್ಲಿ ಸುಮಾರು 4,500 ವಿಮಾನಗಳು ರದ್ದುಗೊಂಡಿವೆ. ಇದರಿಂದಾಗಿ ವೈದ್ಯಕೀಯ ತುರ್ತುಸ್ಥಿತಿ, ಕೌಟುಂಬಿಕ ಕಾರ್ಯಕ್ರಮಗಳು ಸೇರಿದಂತೆ ತುರ್ತು ಕೆಲಸಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿಯೇ ಬಾಕಿಯಾಗುವಂತಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರ ಆಕ್ರೋಶದ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗಿದ್ದು, ಜನರ ಸಂಕಷ್ಟವನ್ನು ಎತ್ತಿ ತೋರಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು, ಸರ್ಕಾರವು ಈ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಂಡಿಗೋ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಅವರು, ನಿಯಮ ಉಲ್ಲಂಘಿಸುವ ವಿಮಾನಯಾನ ಸಂಸ್ಥೆಗಳಿಗೆ ಇದೊಂದು ಪಾಠವಾಗುವಂತೆ ಕ್ರಮ ಜರುಗಿಸಲಾಗುವುದು ಎಂದು ಸಂಸತ್ತಿನಲ್ಲಿ ತಿಳಿಸಿದ್ದಾರೆ. ಪೈಲಟ್‌ಗಳು ಮತ್ತು ಸಿಬ್ಬಂದಿಯ ರೋಸ್ಟರ್ ನಿರ್ವಹಣೆ ಮಾಡುವುದು ಆಯಾ ಸಂಸ್ಥೆಯ ಜವಾಬ್ದಾರಿಯಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಕ್ಕಟ್ಟಿನ ಹಿನ್ನೆಲೆ ವಿಮಾನ ರದ್ದಾದ ಕಾರಣ ಇಂಡಿಗೋ ಸಂಸ್ಥೆಯು ಈಗಾಗಲೇ 830 ಕೋಟಿ ರೂ. ಹಣವನ್ನು ಪ್ರಯಾಣಿಕರಿಗೆ ಮರುಪಾವತಿ (ರೀಫಂಡ್) ಮಾಡಿದೆ. ಅಲ್ಲದೆ, ಮಾರುಕಟ್ಟೆಯಲ್ಲಿ ಸಂಸ್ಥೆಯ ಮೌಲ್ಯ ಸುಮಾರು 37,000 ಕೋಟಿ ರೂ.ಗಳಷ್ಟು ಕುಸಿತ ಕಂಡಿದೆ. ಸುಮಾರು 9.5 ಲಕ್ಷ ಟಿಕೆಟ್‌ಗಳ ಮೇಲೆ ಪರಿಣಾಮ ಉಂಟಾಗಿದ್ದು, ಮರುಪಾವತಿಯಲ್ಲಿನ ವಿಳಂಬ ಮತ್ತು ದೋಷಗಳು ಪ್ರಯಾಣಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿವೆ.
ಇದನ್ನೂ ಓದಿ: ತೆಲುಗು ನಟಿ ಹೇಮಾಗೆ ಬಿಗ್ ರಿಲೀಫ್ | ಡ್ರಗ್ಸ್ ಸೇವನೆ ಕೇಸ್ ರದ್ದುಗೊಳಿಸಿದ ಹೈಕೋರ್ಟ್



















