ಬೆಂಗಳೂರು: ಕೆಜಿಎಫ್ ಬಾಬು ನಿವಾಸದ ಮೇಲೆ ಆರ್.ಟಿ.ಒ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಕೆಜಿಎಫ್ ಬಾಬು ಅವರಲ್ಲಿದ್ದ ಐಷಾರಾಮಿ ಕಾರುಗಳನ್ನು ಆರ್.ಟಿ.ಒ ಅಧಿಕಾರಿಗಳು ಸೀಜ್ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ ವಸಂತ ನಗರದಲ್ಲಿರುವ ಕೆಜಿಎಫ್ ಬಾಬು ಅವರ ರುಕ್ಸಾನಾ ಪ್ಯಾಲೇಸ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಆರ್.ಟಿ.ಒ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಸೆಲೆಬ್ರಿಟಿಗಳು ಬಳಕೆ ಮಾಡಿರುವ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಬಾಬುಗಿದೆ. ಕೆಜಿಎಫ್ ಬಾಬು ಬಳಿ ಎರಡು ರೋಲ್ಸ್ ರಾಯ್ಸ್ ಕಾರುಗಳಿವೆ. ಅಮಿತಾಭ್ ಬಚ್ಚನ್ ಬಳಸುತ್ತಿದ್ದ MH 11 AX 1 ಹಾಗೂ ಆಮಿರ್ ಖಾನ್ ಒಂದು ವರ್ಷ ಬಳಸಿದ್ದ MH 02 BB 2 ಸಂಖ್ಯೆಯ ಕಾರುಗಳನನ್ನು ಬಾಬು ಖರೀದಿಸಿದ್ದರು.
ಈಗ ಬಾಬು ಆ ಕಾರುಗಳಿಗೆ ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ಆರ್ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದೆ.
ಈ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕೆಜಿಎಫ್ ಬಾಬು, ನಾನು ಟ್ಯಾಕ್ಸ್ ಕಟ್ಟಲು ಸಿದ್ಧನಿದ್ದೇನೆ. ನನ್ನ ಎರಡು ಕಾರುಗಳಿಗೆ ಮಹಾರಾಷ್ಟ್ರದಲ್ಲಿ ನೋಂದಣಿ ಆಗಿದೆ. 2 ಕಾರುಗಳಿಗೆ ಮಹಾರಾಷ್ಟ್ರದಲ್ಲಿ ಲೈಫ್ಟೈಮ್ ಟ್ಯಾಕ್ಸ್ ಕಟ್ಟಿದ್ದೇನೆ. ಈಗ RTO ಅಧಿಕಾರಿಗಳು ಕರ್ನಾಟಕ ತೆರಿಗೆ ಕಟ್ಟಿ ಎನ್ನುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಟ್ಯಾಕ್ಸ್ ಕಟ್ಟದೇ ಇರಲ್ಲ. ಆರ್ಟಿಒ ಈಗ ಅವಕಾಶ ಕೊಟ್ಟರೆ ಈಗಲೇ ತೆರಿಗೆ ಕಟ್ಟುತ್ತೇನೆ’ ಎಂದು ಅವರು ಹೇಳಿದ್ದಾರೆ.