ನವದೆಹಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಆದ್ದರಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನಡೆಸಿದ ವಾಗ್ದಾಳಿಗೆ ತಿರುಗೇಟು ನೀಡಿದ ಅವರು, 1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಆರ್‌ಎಸ್‌ಎಸ್ ಅನ್ನು ಟೀಕಿಸಿದ ಸರ್ದಾರ್ ಪಟೇಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ದೇಶದಲ್ಲಿನ ಹೆಚ್ಚಿನ ಸಮಸ್ಯೆಗಳು ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಬಿಜೆಪಿ-ಆರ್‌ಎಸ್‌ಎಸ್‌ಗೆ ಸಂಬಂಧಿಸಿವೆ. ಹಾಗಾಗಿ ಆರ್‌ಎಸ್‌ಎಸ್ ಅನ್ನು ನಿಷೇಧಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಇಂದು ದೇಶವು “ಉಕ್ಕಿನ ಮನುಷ್ಯ” ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯತಿಥಿಯನ್ನು ಆಚರಿಸುತ್ತಿದೆ. ಈ ಇಬ್ಬರು ಮಹಾನ್ ನಾಯಕರು, “ಉಕ್ಕಿನ ಮನುಷ್ಯ” ಮತ್ತು “ಉಕ್ಕಿನ ಮಹಿಳೆ”, ದೇಶದ ಏಕತೆಯನ್ನು ಕಾಪಾಡಿಕೊಳ್ಳಲು ಪ್ರಮುಖ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ದಾರ್ ಪಟೇಲ್ ಅವರು ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ ಖರ್ಗೆ, ಮಹಾತ್ಮಾ ಗಾಂಧಿಯವರ ಹತ್ಯೆಯ ದುರಂತದ ವಾತಾವರಣವನ್ನು ಆರ್‌ಎಸ್‌ಎಸ್ ಸೃಷ್ಟಿಸಿದೆ ಎಂದು ಗೃಹ ಸಚಿವರಾಗಿದ್ದ ಪಟೇಲ್ ಹೇಳಿದ್ದರು. ಪಟೇಲ್ ಮತ್ತು ನೆಹರು ಪರಸ್ಪರ ಅಪಾರ ಗೌರವ ಹೊಂದಿದ್ದರು. ಬಿಜೆಪಿ ಯಾವಾಗಲೂ ನೆಹರು ಮತ್ತು ಪಟೇಲ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಬಿಂಬಿಸಲು ಪ್ರಯತ್ನಿಸುತ್ತದೆ. ಆದರೆ ವಾಸ್ತವದಲ್ಲಿ ಅವರಿಗೆ ಪರಸ್ಪರ ಅಪಾರ ಗೌರವವಿತ್ತು. ರಾಷ್ಟ್ರೀಯ ಏಕತೆಯನ್ನು ಸ್ಥಾಪಿಸುವಲ್ಲಿ ಪಟೇಲ್ ಅವರ ಪಾತ್ರವನ್ನು ನೆಹರು ಶ್ಲಾಘಿಸಿದರು ಮತ್ತು ಪಟೇಲ್ ನೆಹರು ಅವರನ್ನು ಆದರ್ಶ ನಾಯಕ ಎಂದು ಬಣ್ಣಿಸಿದ್ದರು ಎಂದು ಹೇಳಿದ್ದಾರೆ.
2002ರ ಗುಜರಾತ್ ಗಲಭೆಗಳ ಉಲ್ಲೇಖಗಳನ್ನು ಎನ್‌ಸಿಇಆರ್‌ಟಿ ಪುಸ್ತಕಗಳಿಂದ ತೆಗೆದುಹಾಕಲಾಗಿದೆ, ಪಠ್ಯಪುಸ್ತಕಗಳಿಂದ ಸತ್ಯವನ್ನು ಅಳಿಸುವುದು ಸರಿಯಲ್ಲ, ಅದು ಅವರ ಉದ್ದೇಶಗಳನ್ನು ಬಹಿರಂಗಪಡಿಸುತ್ತದೆ. ಅವರು ಯಾವಾಗಲೂ ಸುಳ್ಳನ್ನು ಸತ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತಾರೆ. ನಮ್ಮ ಪ್ರಧಾನಿ ಇದರಲ್ಲಿ ಪರಿಣಿತರು ಮತ್ತು ಅವರ ಅನುಯಾಯಿಗಳು ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಜಾತ್ಯತೀತತೆಯನ್ನು ರಕ್ಷಿಸಲು ಸರ್ದಾರ್ ಪಟೇಲ್ ಆರ್‌ಎಸ್‌ಎಸ್ ಅನ್ನು ನಿಷೇಧಿಸಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್.. ನ.21ಕ್ಕೆ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸ್ತಾರಂತೆ | ಪ್ರಶ್ನೆಗೆ ಸಿದ್ದರಾಮಯ್ಯ ಗರಂ!



















