ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿ, ಜನರ ಮುಂದೆ ಮುಜುಗರ ಮಾಡಬೇಕಾಗಿರುವ ವಿಪಕ್ಷ ಬಿಜೆಪಿಯಲ್ಲಿಯೇ ಎಲ್ಲವೂ ಸರಿಯಲ್ಲ ಎಂಬುವುದು ಜಗಜ್ಜಾಹೀರಾಗಿದೆ. ಈ ಸಮಸ್ಯೆ ಶಮನ ಮಾಡಲು ಈಗ ಆರೆಸ್ಸೆಸ್ಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿಯೇ ಗುರುವಾರ ಬೆಂಗಳೂರಿನ ಆರೆಸ್ಸೆಸ್ ಕಚೇರಿಯಲ್ಲಿ ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ಬಿಜೆಪಿ ಭಿನ್ನಮತೀಯ ನಾಯಕರ ಸಭೆ ಕರೆಯಲಾಗಿದೆ.
ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣದ ವಿರುದ್ಧ ಹೋರಾಟ ನಡೆಸಿದರೂ ಹಲವರ ಅಸಮಾಧಾನ ಬಹಿರಂಗವಾಗಿತ್ತು. ಹೀಗಾಗಿ ಆರೆಸ್ಸೆಸ್ ನೋವು ಶಮನಗೊಳಿಸುವ ಕಾಯಕ ಮಾಡಲು ಮುಂದಾಗಿದೆ.
ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿರೋಧಿ ಬಣದ ನಾಯಕರು ಕೂಡ ಉಪಸ್ಥಿತರಿರಲಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ್ ಸೇರಿದಂತೆ ಹಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಹೀಗಾಗಿ ಹೈಕಮಾಂಡ್ ಗೆ ಎರಡೂ ಬಣದ ನಾಯಕರು ದೂರು ನೀಡಿದ್ದರು. ಈ ಭಿನ್ನಾಭಿಪ್ರಾಯ ಶಮನಗೊಳಿಸಲು ಆರೆಸ್ಸೆಸ್ ಮುಂದಾಗಿದೆ. ಬಂಡಾಯ ನಾಯಕರ ಮನಸ್ತಾಪ ಶಮನವಾಗುವುದೇ ನೋಡಬೇಕಿದೆ.