ಉಡುಪಿ/ಬೆಂಗಳೂರು : ಆರ್.ಎಸ್.ಎಸ್ ಕುರಿತಾದ ಕೆಲವು ರಾಜಕಾರಣಿಗಳ ಹೇಳಿಕೆಗಳಿಗೆ ಸಂಬಂಧಿಸಿದಂತೆ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, ಆರ್.ಎಸ್.ಎಸ್ ಅನ್ನು ಪ್ರಚಾರಕ್ಕಾಗಿ ಬಳಸುವುದಿಲ್ಲ, ಕುಟುಂಬ ರಾಜಕಾರಣ ಮಾಡುವ ಪಳೆಯುಳಿಕೆಗಳಿಗೆ ಇದು ಅರ್ಥವಾಗಲ್ಲ ಎಂದು ಮಾತಿನ ಚಾಟಿ ಬೀಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಸುನೀಲ್ ಕುಮಾರ್, “ಸಂಘ,ಸಂಘಸ್ಥಾನ, ಗಣವೇಶ ನಮಗೆ ಪ್ರಚಾರದ ಸರಕಲ್ಲ. ಅದು ಸಂಸ್ಕಾರ. ಅದು ನಮ್ಮ ಶ್ರದ್ಧೆಯ ಭಾಗ. “ಸ್ವಯಂಸೇವಕ”ತ್ವ ನಮಗೆ ಸಂಘ ನೀಡಿದ ನಿರಂತರ ಆಸ್ತಿ. ನನ್ನ ತಂದೆ ದಿ.ವಾಸುದೇವ ಸಂಘದ ಶ್ರದ್ಧೆಯ ಸ್ವಯಂಸೇವಕ. ಅವರೇ ನನ್ನನ್ನು ಸಂಘದ ಮಡಿಲಿಗೆ ಕರೆತಂದಿದ್ದು. ನಾನು ವಾಸುದೇವ ಸುನೀಲ್ ಕುಮಾರ್, ನನ್ನ ಮಗ ದತ್ತಾತ್ರೇಯ ಸುನೀಲ್ ಕುಮಾರ್ ಕೂಡಾ ಸಂಘದ ಸ್ವಯಂಸೇವಕ ಎಂದವರು ಬರೆದುಕೊಂಡಿದ್ದಾರೆ.
ನನ್ನ ಕುಟುಂಬದಂತೆ ಪೀಳಿಗೆಯಿಂದ ಪೀಳಿಗೆಗೆ ಸ್ವಯಂಸೇವಕತ್ವವನ್ನು ಪರಂಪರೆ ಹಾಗೂ ಬಳುವಳಿಯಾಗಿ ಉಳಿಸಿಕೊಂಡು ಬಂದ ಲಕ್ಷಾಂತರ ಕುಟುಂಬಗಳು ಈ ದೇಶದಲ್ಲಿವೆ. ಆದರೆ ನಮಗ್ಯಾರಿಗೂ ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕೆಂಬ ಉದ್ದೇಶ ಇರಲಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಕೆಲವರು ನಿಮ್ಮ ಮಕ್ಕಳನ್ನು ಸಂಘಕ್ಕೆ ಕಳುಹಿಸಿದ್ದೀರಾ? ಎಂದು ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ, ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡುತ್ತಾ, ನಾನು ನನ್ನ ಮಗನನ್ನು ಸ್ವಯಂಸೇವಕನಾಗಿ ಮಾಡುತ್ತೇನೆಯೇ ವಿನಾ ಶಾಸಕನನ್ನಾಗಿಯಲ್ಲ. “ಅಧಿಕಾರ ನನ್ನಪ್ಪನಿಂದ ನನಗೆ, ನನ್ನಿಂದ ನನ್ನ ಮುಂದಿನ ಪೀಳಿಗೆಗೆ” ಎಂದು ಯೋಚಿಸುವ ಕುಟುಂಬ ರಾಜಕಾರಣದ ಪಳೆಯುಳಿಕೆಗಳಿಗೆ, ಈ ಪರಂಪರೆ ಅರ್ಥವಾಗುವುದೂ ಇಲ್ಲ.” ಎಂದು ತಿಳಿಸಿದ್ದಾರೆ.