ಜೋಧಪುರ : ರಾಜಸ್ಥಾನದ ಜೋಧಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್. ಎಸ್) ಮತ್ತದರ ಅಂಗ ಸಂಸ್ಥೆಗಳ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಸಮನ್ವಯ ಸಭೆಗೆ ಇಂದು(ಶುಕ್ರವಾರ, ಸೆ.05) ಚಾಲನೆ ಸಿಕ್ಕಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ ಭಾಗವತ್ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮನ್ವಯ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ರಾಷ್ಟ್ರದ ಏಕತೆ, ಭದ್ರತೆ ಮತ್ತು ಸಾಮಾಜಿಕ ದೃಷ್ಟಿಕೋನದ ಬಗ್ಗೆ ಪ್ರಮುಖವಾಗಿ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
‘ಸಾಮಾಜಿಕ ಸಾಮರಸ್ಯದ ಉತ್ತೇಜನ, ಕೌಟುಂಬಿಕ ವ್ಯವಸ್ಥೆ ಬಲಪಡಿಸುವುದು, ಪರಿಸರ ಸ್ನೇಹಿ ಜೀವನಶೈಲಿಗೆ ಒತ್ತು, ಸ್ವಾವಲಂಬಿ ರಚನೆ ಮತ್ತು ನಾಗರಿಕರ ತೃಪ್ತಿ, ದೇಶದ ಹಲವು ಭಾಗಗಳಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಸಂದರ್ಭಗಳ ಜತೆಯಲ್ಲೇ ಕರ್ತವ್ಯ ಎಂಬ ಐದು ವಿಶಾಲ ವಿಷಯಗಳ ಮೇಲೆ ಚರ್ಚೆ ನಡೆಯಲಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ABVP), ಭಾರತೀಯ ಕಿಸಾನ್ ಸಂಘ, ಭಾರತೀಯ ಮದ್ದೂರ್ ಸಂಘ, ವಿದ್ಯಾ ಭಾರತಿ ಸೇರಿದಂತೆ ಆರ್‌ಎಸ್‌ಎಸ್‌ನ 32 ಅಂಗಸಂಸ್ಥೆಗಳ 320 ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.



















