ಹೈದರಾಬಾದ್: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ವರದಿಯ ನಂತರ ನಟಿಯರ ಲೈಂಗಿಕ ದೌರ್ಜನ್ಯದ ಸುದ್ದಿಗಳು ಭಾರೀ ಸದ್ದು ಮಾಡುತ್ತಿವೆ. ಹಿರಿಯ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರಿಂದ ಅನುಭವಿಸಿದ ದೌರ್ಜನ್ಯಗಳ ಕುರಿತು ನಟಿಯರು ಈಗ ಮೌನ ಮುರಿದು ಮಾತನಾಡುತ್ತಿದ್ದಾರೆ.
ಹೇಮಾ ಸಮಿತಿ ವರದಿ ಸಲ್ಲಿಸಿದ ನಂತರ ಈಗ ಮಲಯಾಲಂ ಅಷ್ಟೇ ಅಲ್ಲದೇ, ಬೇರೆ ಬೇರೆ ರಾಜ್ಯಗಳ ಚಿತ್ರರಂಗದಲ್ಲಿನ ಕರಾಳ ಮುಖಗಳು ಬೆಳಕಿಗೆ ಬರುತ್ತಿವೆ. ಪರ-ವಿರೋಧದ ಚರ್ಚೆ ಕೂಡ ನಡೆಯುತ್ತಿವೆ. ಆರೋಪ- ಪ್ರತ್ಯಾರೋಪಗಳು ಕೂಡ ಸದ್ದು ಮಾಡುತ್ತಿವೆ.
ಹೀಗಾಗಿ ಕೆಲವು ಸೆಲೆಬ್ರಿಟಿಗಳ ಹೇಳಿಕೆಗಳು ಭಾರೀ ವಿವಾದಕ್ಕೆ ಕಾರಣವಾಗುತ್ತಿವೆ. ಟಾಲಿವುಡ್ ನ ಖ್ಯಾತ ನಿರ್ದೇಶಕ ಗೀತಾ ಕೃಷ್ಣ ನಟಿಯರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿ, ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಿರ್ದೇಶಕ ಗೀತಾ ಕೃಷ್ಣ, ನಟಿಯರಿಗೆ ಮಾಹಿತಿ ನೀಡದೆ ಅಂಥಹಾ ದೃಶ್ಯಗಳನ್ನು ತೆಗೆಯಲು ಸಾಧ್ಯವಿಲ್ಲ. ಯಾವ ನಟಿಗೂ ಸಹ ಬಲವಂತ ಮಾಡಿ ರೊಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸುವಂತೆ ಹೇಳುವುದಿಲ್ಲ. ಹಾಗೆ ಮಾಡಿದರೆ ನಟಿ ಎಲ್ಲರ ಮುಂದೊಂದು ದಿನ ಇದನ್ನು ಬಹಿರಂಗ ಮಾಡುತ್ತಾಳೆ. ಅಫೇರ್ಗಳು ಕಾಮನ್ ಆಗಿವೆ.
ತೆಲುಗು ಚಿತ್ರರಂಗದಲ್ಲಿ ಇದು ಸಾಮಾನ್ಯವಾಗಿದ್ದು, ಯಾರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವು ನಟಿಯರಿಗೆ ಕೇವಲ 50 ಲಕ್ಷ ರೂಪಾಯಿ ಕೊಟ್ಟರೆ ಸಾಕು ಬಂದು ಬಿಡುತ್ತಾರೆ. ಕೆಲವು ದೊಡ್ಡ ಅಧಿಕಾರಿಗಳು, ರಾಜಕಾರಣಿಗಳಿಗೆ ನಾಯಕಿಯೊಟ್ಟಿಗೆ ಆತ್ಮೀಯ ಸಂಬಂಧಗಳು ಇವೆ ಎಂದು ಹೇಳಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಟಾಲಿವುಡ್ ನಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗಿದೆ. ನಟ-ನಟಿಯರು ಡ್ರಗ್ಸ್ಗೆ ದಾಸರಾಗಿದ್ದಾರೆ. ರವಿತೇಜ ಸಹೋದರ ಕೂಡ ಡ್ರಗ್ಸ್ ಗೆ ದಾಸನಾಗಿದ್ದ. ಹೀಗಾಗಿ ಆತ ಸಾವನ್ನಪ್ಪಿದಾಗ ನೋಡಲು ಕೂಡ ಹೋಗಿರಲಿಲ್ಲ. ಡ್ರಗ್ಸ್ ಎಂಬುದು ಶ್ರೀಮಂತ ಜನರ ಮೋಜಿನ ವಸ್ತು, ಬಡವರಿಗೆ, ಮಧ್ಯಮ ವರ್ಗದವರಿಗೆ ಅದು ಎಟುಕುವುದಿಲ್ಲ. ಹೀಗಾಗಿಯೇ ಅವರೆಲ್ಲ ತುಂಬಾ ಸೇಫ್ ಆಗಿದ್ದಾರೆ. ಹಲವರಂತೂ ಚಿತ್ರರಂಗದಲ್ಲಿ ಡ್ರಗ್ಸ್ ನ್ನೇ ಉದ್ಯಮ ಮಾಡಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎಂದಿರುವ ಅವರು, ಮಹಿಳೆಯರ ಬಗ್ಗೆ ಕೀಳು ಹೇಳಿಕೆ ನೀಡಿದ್ದಾರೆ.