ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳು, ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರ್ಕಾರವು ಹಲವು ರೀತಿಯ ಯೋಜನೆಗಳನ್ನು ರೂಪಿಸಿದೆ. ಆದರೆ, ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದ ಕಾರಣ ಹೆಚ್ಚಿನ ಜನ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಆಗುವುದಿಲ್ಲ. ಇದೇ ರೀತಿ, ಕೇಂದ್ರ ಸರ್ಕಾರವು ಬೀದಿ ಬದಿ ವ್ಯಾಪಾರಿಗಳು ಕೂಡ ವರ್ಷಕ್ಕೆ 36 ಸಾವಿರ ರೂಪಾಯಿ ಪಿಂಚಣಿ ಪಡೆಯುವ ಯೋಜನೆ ರೂಪಿಸಿದೆ.
ಹೌದು, ಬೀದಿ ಬದಿ ವ್ಯಾಪಾರಿಗಳಿಗಾಗಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ (Pradhan Mantri Shram Yogi Maandhan Yojana) ರೂಪಿಸಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಬೀದಿ ಬದಿ ವ್ಯಾಪಾರಿಗಳು 60 ವರ್ಷ ದಾಟಿದ ಬಳಿಕ ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದಾಗಿದೆ.
ಯಾರಿಗೆಲ್ಲ ಲಭ್ಯ?
ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ದಿನಗೂಲಿ ಕಾರ್ಮಿಕರು, ಟೈಲರ್ ಗಳು, ಕೃಷಿ ಕಾರ್ಮಿಕರು, ಬಟ್ಟೆ ಉದ್ಯೋಗಿಗಳು, ಮನೆಯ ಕೆಲಸಗಾರರು ಸೇರಿ ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರು ಯೋಜನೆಯ ಲಾಭ ಪಡೆಯಬಹುದಾಗಿದೆ. ವ್ಯಾಪಾರಿಗಳು, ಕೂಲಿ ಕಾರ್ಮಿಕರು ಸೇರಿ ಆಯಾ ವಲಯಗಳ ಕಾರ್ಮಿಕರು ತಿಂಗಳಿಗೆ ಕೇವಲ 55 ರೂಪಾಯಿಯಿಂದ 200 ರೂಪಾಯಿ ಪ್ರೀಮಿಯಂ ಪಾವತಿಸಿದರೂ ಸಾಕು, 60 ವರ್ಷದ ಬಳಿಕ ಜೀವಿತಾವಧಿಯವರೆಗ ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ ಪಡೆಯಲಿದ್ದಾರೆ.
ಯೋಜನೆಯ ಲಾಭ ಪಡೆಯುವವರು 18 ವರ್ಷದಿಂದ 40 ವರ್ಷದೊಳಗಿನವರಾಗಿರಬೇಕು. ಇವರ ಆದಾಯವು ಮಾಸಿಕ ಗರಿಷ್ಠ 15 ಸಾವಿರ ರೂಪಾಯಿ ಇರಬೇಕು. ಅರ್ಜಿ ಸಲ್ಲಿಸಲು ಬಯಸುವವರು ಅಧಿಕೃತ ವೆಬ್‌ಸೈಟ್ www.maandhan.in/shramyogi ಗೆ ಭೇಟಿ ನೀಡಬೇಕು. ಆಧಾರ್ ಕಾರ್ಡ್, ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಬೇಕು. ಇದಾದ ಬಳಿಕ ನಿಮ್ಮ ವಯಸ್ಸಿಗೆ ಅನುಗುಣವಾಗಿ ಪ್ರೀಮಿಯಂ ನಿಗದಿಯಾಗುತ್ತದೆ. ಹಾಗೆಯೇ, ಕಾಮನ್ ಸರ್ವಿಸ್ ಸೆಂಟರ್ ಗಳಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ನೀಡುವ ಮೂಲಕವೂ ಅರ್ಜಿ ಸಲ್ಲಿಸಬಹುದು.