ಬೆಂಗಳೂರು : ತಿಂಗಳಿಗೆ ಇಂತಿಷ್ಟು ಎಂದು ಸಂಬಳ ಪಡೆಯುವವರಿಗೆ ಪ್ರತಿ ತಿಂಗಳು ಕೂಡ ಕಮಿಟ್‌ಮೆಂಟ್‌ಗಳು ಎಂಬ ಜವಾಬ್ದಾರಿಗಳು ಹೆಗಲೇರಿರುತ್ತವೆ. ಇಂತಹದ್ದರ ಮಧ್ಯೆ ಕೋಟ್ಯಂತರ ರೂಪಾಯಿ ಗಳಿಸಬೇಕು ಎಂದರೆ ಆಗುವುದಿಲ್ಲ. ಆದರೆ, ಸಂಬಳ ಪಡೆಯುವವರು ಕೂಡ 25 ಲಕ್ಷ ರೂಪಾಯಿ ಗಳಿಕೆಯ ಗುರಿಯನ್ನು ಇಟ್ಟುಕೊಂಡು, ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಗುರಿಯನ್ನು ಸಾಧಿಸಬಹುದಾಗಿದೆ.
ಹೌದು, ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ ಅಥವಾ ಎಸ್ಐಪಿಗಳ ಮೂಲಕ ಜೀವನದ ಮೊದಲ 25 ಲಕ್ಷ ರೂಪಾಯಿ ಗುರಿಯನ್ನು ಸಾಧಿಸಬಹುದಾಗಿದೆ. ನಿಮಗೆ ಬರುವ ಸಂಬಳದಲ್ಲಿಯೇ ತಿಂಗಳಿಗೆ 5 ಸಾವಿರ ರೂಪಾಯಿ, 8 ಸಾವಿರ ರೂಪಾಯಿ, ಸಾಧ್ಯವಾದರೆ 10 ಸಾವಿರ ರೂಪಾಯಿಯನ್ನು ಎಸ್ಐಪಿಯಲ್ಲಿ ಹೂಡಿಕೆ ಮಾಡುವ ಮೂಲಕ ಗುರಿ ಸಾಧಿಸಬಹುದಾಗಿದೆ. ಇದಕ್ಕಾಗಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ.
ನೀವು ಕೇವಲ 5 ವರ್ಷದಲ್ಲಿ 25 ಲಕ್ಷ ರೂಪಾಯಿ ಗಳಿಸಬೇಕು ಎಂದರೆ, ಮಾಸಿಕ ನೀವು 31 ಸಾವಿರ ರೂಪಾಯಿ ಎಸ್ಐಪಿ ಮಾಡಬೇಕು. ಶೇ.12ರಷ್ಟು ರಿಟರ್ನ್ಸ್ ಎಂದರೂ ನೀವು 25.14 ಲಕ್ಷ ರೂಪಾಯಿ ಆದಾಯ ಪಡೆಯಬಹುದಾಗಿದೆ. ನೀವು ಪ್ರತಿ ತಿಂಗಳು 31 ಸಾವಿರ ರೂಪಾಯಿಯಂತೆ 5 ವರ್ಷ ಹೂಡಿಕೆ ಮಾಡಿದರೆ, ನಿಮ್ಮ ಹೂಡಿಕೆ ಮೊತ್ತವು 18.6 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆ ಶೇ.12ರಷ್ಟು ರಿಟರ್ನ್ಸ್ ಎಂದರೂ 6.54 ಲಕ್ಷ ರೂಪಾಯಿ ರಿಟರ್ನ್ಸ್ ಸಿಗುತ್ತದೆ. ಆಗ ನೀವು 25.14 ಲಕ್ಷ ರೂಪಾಯಿ ಗಳಿಸಬಹುದಾಗಿದೆ.
ಇದೇ ಶೇ.12ರಷ್ಟು ಲೆಕ್ಕಾಚಾರದಲ್ಲಿ ಪ್ರತಿ ತಿಂಗಳು 11,500 ರೂ.ನಂತೆ ಹೂಡಿಕೆ ಮಾಡಿದರೆ, 25 ಲಕ್ಷ ರೂಪಾಯಿ ಗಳಿಸಲು 10 ವರ್ಷ ಬೇಕಾಗುತ್ತದೆ. ಇನ್ನು ಪ್ರತಿ ತಿಂಗಳು 5,500 ರೂಪಾಯಿ ಎಸ್ಐಪಿ ಕಟ್ಟಿದರೆ, 15 ವರ್ಷದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಹೀಗೆ ಹೆಚ್ಚಿನ ಮೊತ್ತ ಹೂಡಿಕೆ ಮಾಡಿದಷ್ಟೂ ಶೀಘ್ರದಲ್ಲಿಯೇ ಗುರಿ ಮುಟ್ಟಬಹುದಾಗಿದೆ.
ಗಮನಿಸಿ |
ಮ್ಯೂಚುವಲ್ ಫಂಡ್ ಎಸ್ಐಪಿ ಯೋಜನೆಗಳು ಮಾರುಕಟ್ಟೆ ಏರಿಳಿತದ ಆಧಾರದ ಮೇಲೆ ರಿಟರ್ನ್ಸ್ ನೀಡುತ್ತವೆ. ಅಂದರೆ, ಈ ಮಾದರಿಯ ಹೂಡಿಕೆಯು ರಿಸ್ಕ್ ನಿಂದ ಕೂಡಿರುತ್ತದೆ. ನಾವು ಉದಾಹರಣೆ ಅಥವಾ ಮಾಹಿತಿ ದೃಷ್ಟಿಯಿಂದ ಲೇಖನ ಪ್ರಕಟಿಸಿದ್ದೇವೆಯೇ ಹೊರತು, ಇದು ಹೂಡಿಕೆಗೆ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರನ್ನು ಸಂಪರ್ಕಿಸುವುದು ಕಡ್ಡಾಯ
ಇದನ್ನೂ ಓದಿ : ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ | 16 ಕಾರ್ಮಿಕರು ಸಾವು.. ಹಲವರು ಸಿಲುಕಿರುವ ಶಂಕೆ!



















