ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಭೂಮಿ ರಹಿತ ಮಹಿಳಾ ಕೃಷಿ ಕಾರ್ಮಿಕರು ಕೂಡ ಜಮೀನು ಖರೀದಿಸಲು ಎಂದು ರಾಜ್ಯ ಸರ್ಕಾರವು ಭೂ ಒಡೆತನ ಯೋಜನೆ (SC/ST Land Purchase Scheme) ಜಾರಿಗೆ ತಂದಿದೆ. ಈಗ ಯೋಜನೆಯ ಅನ್ವಯ ಅರ್ಹ ಫಲಾನುಭವಿಗಳಿಗೆ ಭೂಮಿ ಖರೀದಿಗಾಗಿ ಸಹಾಯಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸುವ ಮೂಲಕ ಸರ್ಕಾರದ ಯೋಜನೆಯ ಸವಲತ್ತು ಪಡೆಯಬಹುದಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರದ ಭೂ ಮಾಲೀಕರಿಂದ ಜಮೀನನ್ನು ಖರೀದಿಸಿ, ಪರಿಶಿಷ್ಟ ಜಾತಿಯ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡುವ ಯೋಜನೆ ಇದಾಗಿದೆ. 27 ಜಿಲ್ಲೆಗಳಿಗೆ ಒಟ್ಟು ಘಟಕ ವೆಚ್ಚ ರೂ 20 ಲಕ್ಷ ರೂಪಾಯಿ ಮತ್ತು 4 ಜಿಲ್ಲೆಗಳಿಗೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ) ರೂ 25 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಇದರಲ್ಲಿ ಶೇ.50ರಷ್ಟು ಹಣವನ್ನು ಸಹಾಯಧನವನ್ನಾಗಿ ಹಾಗೂ ಶೇ.50ರಷ್ಟು ಮೊತ್ತವನ್ನು ಸಾಲವಾಗಿ ನೀಡಲಾಗುತ್ತದೆ.
ಸಲ್ಲಿಸಬೇಕಾದ ದಾಖಲೆಗಳು
ಅರ್ಜಿ ಸಲ್ಲಿಸುವವರು ವಿವಿಧ ದಾಖಲೆಗಳನ್ನು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಸರ್ಟಿಫಿಕೇಟ್, ಭೂ ರಹಿತ ಕೃಷಿ ಕಾರ್ಮಿಕರ ಪ್ರಮಾಣಪತ್ರ, ರೇಷನ್ ಕಾರ್ಡ್, ಭೂ ಮಾಲೀಕರ ಭೂ ಮಾರಾಟ ಮಾಡಲು ಮುಚ್ಚಳಿಕೆ ಪತ್ರ, ಭೂ ಮಾಲೀಕರ ವಂಶಾವಳಿ, ಅರ್ಜಿದಾರರ ಪೋಟೋ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಭೂ ಮಾಲೀಕರಿಂದ ಇತ್ತೀಚಿನ ಪಹಣಿ/ಊತಾರ್/RTC ಪ್ರತಿಗಳನ್ನು ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ https://swdcorp.karnataka.gov.in/ADCLPortal/schemedetail/LPS ವೆಬ್ ಸೈಟ್ ಗೆ ಭೇಟಿ ನೀಡಬೇಕು
- ವೆಬ್ ಪೇಜಿನ ಕೆಳಗೆ ಕಾಣುವ “ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಓಪನ್ ಮಾಡಬೇಕು
- ಮೊಬೈಲ್ ನಂಬರ್ ಮತ್ತು OTP ಅನ್ನು ನಮೂದಿಸಿ, ಕ್ಯಾಪ್ಚ್ ಕೋಡ್ ಹಾಕಿ “Submit” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು
- ಲಾಗಿನ್ ಅದ ಬಳಿಕ ಅಧಿಕೃತ ಅರ್ಜಿ ನಮೂನೆ ಓಪನ್ ಅಗುತ್ತದೆ. ಇಲ್ಲಿ ಎಲ್ಲ ಅಗತ್ಯ ವಿವರ ಹಾಗೂ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಸಬ್ ಮಿಟ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಸಲ್ಲಿಕೆಯಾಗುತ್ತದೆ.