ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ದರ್ಶನ್ ಗೆ ರಾಜಾತಿಥ್ಯ ನೀಡಲಾಗುತ್ತಿತ್ತು ಎಂಬ ಆರೋಪ ಬರುತ್ತಿದ್ದಂತೆ ಬೇರೆ ಜೈಲಿಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಹೀಗಾಗಿ ದರ್ಶನ್ ರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ. ಬೆಳಿಗ್ಗೆ 4.30ರ ವೇಳೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್ ರನ್ನು ಪೊಲೀಸರು ಕರೆದೊಯ್ದಿದ್ದಾರೆ. ಬೆಳಿಗ್ಗೆ 9.30 ರಿಂದ 10ರೊಳಗೆ ಅವರು ಬಳ್ಳಾರಿ ತಲುಪುವ ಸಾಧ್ಯತೆ ಇದೆ.
ಬೊಲೆರೋ ವಾಹನದಲ್ಲಿ ದರ್ಶನ್ ರನ್ನು ಪೊಲೀಸರು ಕರೆದೊಯ್ದಿದ್ದಾರೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ಕರೆದೊಯ್ಯಲಾಗಿದೆ. ಜೈಲಿನಲ್ಲಿ ಸಿಗರೇಟ್ ಸೇದಿದ್ದ ಫೋಟೋ ವೈರಲ್ ಆಗಿತ್ತು. ಇದು ಸಿಎಂ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ, ಕೊಲೆಯಾಗಿರುವ ರೇಣುಕಾಸ್ವಾಮಿ ಕೂಡ ಕಣ್ಣೀರು ಸುರಿಸಿ ಬೇಸರ ವ್ಯಕ್ತಪಡಿಸಿದ್ದರು. ಜನರು ಕೂಡ ಜೈಲಲ್ಲಿ ಉಳ್ಳವರಿಗೆ ಇಷ್ಟೊಂದು ಸೌಲಭ್ಯನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಸಿಎಂ ಆದೇಶ ಹೊರಡಿಸಿದ್ದರು. ಕೋರ್ಟ್ ಕೂಡ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸೂಚಿಸಿತ್ತು.
ಬಳ್ಳಾರಿ ಜೈಲಿಗೆ ದರ್ಶನ್ ತೆರಳುತ್ತಿದ್ದಂತೆ ಜೈಲಿನ ಬಳಿ ಅಭಿಮಾನಿಗಳು ಹೆಚ್ಚು ಜಮಾಯಿಸುವ ಸಾಧ್ಯತೆ ಇದೆ. ಹೀಗಾಗಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ದರ್ಶನ್ ಇದ್ದ ವಾಹನಕ್ಕೆ ಪರದೆ ಕೂಡ ಅಳವಡಿಸಲಾಗಿದೆ. ಹೀಗಾಗಿ, ದರ್ಶನ್ ಅವರು ಕಾಣೋದು ಅನುಮಾನ.


















