ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಬಂಧನ ಭೀತಿ ಎದುರಾಗಿದೆ.
ಶುಕ್ರವಾರ ಹೈಕೋರ್ಟ್ ತನಿಖೆಗೆ ನೀಡಿದ್ದ ತಡೆ ತೆರವು ಮತ್ತು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದೆ. ಇದರ ಬೆನ್ನಲ್ಲೇ ಬೈರತಿ ಬಸವರಾಜ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಬಂಧನ ಭೀತಿ ಹಿನ್ನಲ್ಲೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸದ್ಯ ಪೊಲೀಸರು ಬೈರತಿ ಬಸವರಾಜ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
2025 ಜುಲೈ 15ರಂದು ರಾತ್ರಿ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸೂರು ಲೇಕ್ ಬಳಿ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಬರ್ಬರ ಕೊಲೆ ನಡೆದಿತ್ತು. ಕೊಲೆಯಾದ ಬಿಕ್ಲು ಶಿವ ತಾಯಿ, ಮಾಜಿ ಸಚಿವ ಬೈರತಿ ಬಸವರಾಜ್ ಸೇರಿ ಹಲವರ ವಿರುದ್ಧ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಬೈರತಿ ಬಸವರಾಜ್ ಎ5 ಆರೋಪಿಯಾಗಿ ಎರಡು ಬಾರಿ ವಿಚಾರಣೆ ಎದುರಿಸಿದ್ದರು. ವಿಚಾರಣೆ ವೇಳೆ ಕೊಲೆಗೂ ನನಗೂ ಯಾವುದೇ ಸಂಬಂಧ ಇಲ್ಲ, ಕೊಲೆ ಆರೋಪಿಗಳು ಯಾರು ನನಗೆ ಪರಿಚಯವೇ ಇಲ್ಲ ಅಂತ ಹೇಳಿದ್ದರು.
ಇದರ ಬೆನ್ನಲ್ಲೇ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಅಂದು ಸೂಚನೆ ಕೊಟ್ಟಿತ್ತು. ಆದರೆ ಶುಕ್ರವಾರ ಹೈಕೋರ್ಟ್ನಲ್ಲಿ ಬಲವಂತದ ಕ್ರಮಕ್ಕೆ ನೀಡಿದ್ದ ತೆರವು ಮಾಡಿದ್ದಲ್ಲದೇ, ಬೈರತಿ ಬಸವರಾಜ್ ಪರ ವಕೀಲರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ, ಡಿ.22ಕ್ಕೆ ವಿಚಾರಣೆ ಮುಂದೂಡಿದೆ. ಇತ್ತ ಅಲರ್ಟ್ ಆದ ಸಿಐಡಿ ಅಧಿಕಾರಿಗಳು ಬೈರತಿ ಬಸವರಾಜ್ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ನಿರೀಕ್ಷಣಾ ಜಾಮೀನು ವಜಾ ವಿಚಾರ ಗೊತ್ತಾಗುತ್ತಿದ್ದಂತೆ ಬೈರತಿ ಬಸವರಾಜ್ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಹೋಗಿದ್ದ ಬೈರತಿ ಬಸವರಾಜ್, ಅಲ್ಲಿಂದಲೇ ನಾಪತ್ತೆಯಾಗಿದ್ದಾರೆ. ಸಿಐಡಿ ಅಧಿಕಾರಿಗಳ ತಂಡ ಬೈರತಿ ಬಸವರಾಜ್ ಉಳಿದುಕೊಂಡಿದ್ದ ಜಾಗಕ್ಕೆ ಹೋಗಿ ಅಲ್ಲಿನ ಸಿಸಿಟಿವಿ, ಯಾವ ರಸ್ತೆಯ ಮೂಲಕ ಯಾವ ಕಡೆಗೆ ಹೋಗಿದ್ದಾರೆ ಅನ್ನೋದನ್ನು ಸೇರಿದಂತೆ ಬೇರೆ ಬೇರೆ ಆಯಾಮದಲ್ಲಿ ಮತ್ತು ರಾಜ್ಯಕ್ಕೆ ಸಂಪರ್ಕಿಸುವ ಟೋಲ್‌ಗಳ ಸಿಸಿಟಿಯನ್ನು ಪರಿಶೀಲನೆ ಮಾಡಿದ್ದಾರೆ.
ಈ ವೇಳೆ ಬೈರತಿ ಬಸವರಾಜ್ ಗೋವಾ ಅಥವಾ ಮಹಾರಾಷ್ಟ್ರಕ್ಕೆ ಹೋಗಿರುವ ಮಾಹಿತಿ ಲಭ್ಯವಾಗಿತ್ತು. ತನಿಖೆ ಮುಂದುವರೆಸಿದ ಅಧಿಕಾರಿಗಳಿಗೆ ಬೈರತಿ ಬಸವರಾಜ್ ಕೊನೆಯದಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಲೈವ್ ಲೊಕೇಶನ್ ಪತ್ತೆಯಾಗಿದ್ದು, ಆನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನುವುದು ಗೊತ್ತಾಗಿದೆ.
ಬಿಕ್ಲು ಶಿವಪ್ರಕಾಶ್ ಕೊಲೆ ಆರೋಪಿಗಳು ನನಗೆ ಪರಿಚಯನೇ ಇಲ್ಲ ಅಂದಿದ್ದ ಬೈರತಿ ಬಸವರಾಜ್‌ಗೆ ಈಗ ಸಂಕಷ್ಟ ಎದುರಾಗಿದೆ. ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ಆರೋಪಿಗಳ ಜೊತೆಗೆ ಬೈರತಿ ಬಸವರಾಜ್ ಸಂಪರ್ಕದಲ್ಲಿ ಇರುವುದು ಪತ್ತೆಯಾಗಿದ್ದು, ಕೆಲ ಮಹತ್ಚದ ಸಾಕ್ಷ್ಯಧಾರ ಲಭ್ಯವಾಗಿದೆ ಎನ್ನಲಾಗುತ್ತಿದೆ. ಬೈರತಿ ಬಸವರಾಜ್ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿರುವುದು ಗೊತ್ತಾಗಿದೆ. ಹಾಗಾಗಿ ಯಾವುದೇ ಕ್ಷಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ್ ಬಂಧನವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ನಾಳೆಯಿಂದ ಕರ್ನಾಟಕದಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ



















