ಬೆಂಗಳೂರು : ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ತಾಲೂಕಿನ ದಾಬಸ್ ಪೇಟೆ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ರೌಡಿಶೀಟರ್ ಜಯಂತ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ದಾಬಸ್ ಪೇಟೆ ಠಾಣೆಯ ಇನ್ಸ್ ಪೆಕ್ಟರ್ ಬಿ.ರಾಜು ಫೈರಿಂಗ್ ಮಾಡಿದ್ದಾರೆ.
ದರೋಡೆ ಮಾಡುತ್ತಿದ್ದ ಆರೋಪಿ ಬಂಧಿಸಲು ಪೊಲೀಸರು ಹೋಗಿದ್ದ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ ಇಮ್ರಾನ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಇನ್ಸ್ ಪೆಕ್ಟರ್, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಪಲ್ಸರ್ ಬೈಕ್ ನಲ್ಲಿ ಬಂದು ದರೋಡೆಗೆ ಯತ್ನಿಸಿದ್ದ ಆರೋಪಿ ಜಯಂತ್, ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ಬರೋಬ್ಬರಿ 56 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆರೋಪಿಯನ್ನು ಹಾಗೂ ಗಾಯಗೊಂಡಿರುವ ಹೆಡ್ ಕಾನ್ಸ್ಟೇಬಲ್ ಇಮ್ರಾನ್ ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 2019ರಲ್ಲೂ ದರೋಡೆ ಕೇಸ್ ನಲ್ಲಿ ಆರೋಪಿ ಮೇಲೆ ಫೈರಿಂಗ್ ನಡೆದಿತ್ತು. ಆದರೂ ಆರೋಪಿ ಮಾತ್ರ ತನ್ನ ಹಳೆಯ ಚಾಳಿ ಬಿಡದೆ ಅದೇ ಕಾಯಕ ಮುಂದುವರೆಸಿದ್ದ ಎನ್ನಲಾಗಿದೆ.