ಚೆನ್ನೈ: ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವೊಂದರಲ್ಲಿ “ಅಶ್ಲೀಲ ನೃತ್ಯ” ಪ್ರದರ್ಶನ ಏರ್ಪಡಿಸಿದ್ದಲ್ಲದೆ, ಹಿರಿಯ ಸಚಿವರೊಬ್ಬರು ಅದನ್ನು ನೋಡುತ್ತಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ ಎಂಬ ಆರೋಪ ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಿಎಂಕೆ ಸಚಿವ ಎಸ್. ಪೆರಿಯಕರುಪ್ಪನ್ ಅವರ ನಡೆಗೆ ಬಿಜೆಪಿ ಮತ್ತು ಎಐಎಡಿಎಂಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ಉದಯನಿಧಿ ಸ್ಟಾಲಿನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯುವತಿಯರು ಅರೆಬೆತ್ತಲೆ ಉಡುಪಿನಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ಕಾರ್ಯಕ್ರಮದ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ತಮಿಳುನಾಡು ಸಹಕಾರ ಸಚಿವ ಎಸ್. ಪೆರಿಯಕರುಪ್ಪನ್ ಅವರು ನೃತ್ಯವನ್ನು ಆಸ್ವಾದಿಸುತ್ತಾ ಚಪ್ಪಾಳೆ ತಟ್ಟಿದ್ದಾರೆ.
ಇಷ್ಟೇ ಅಲ್ಲದೆ, ಸಚಿವರು ನೃತ್ಯಗಾರ್ತಿಯರನ್ನು ವೇದಿಕೆಯಿಂದ ಕೆಳಗೆ ಬಂದು ತಮ್ಮ ಹತ್ತಿರ ನೃತ್ಯ ಮಾಡುವಂತೆ ಸನ್ನೆ ಮಾಡಿ ಆಹ್ವಾನಿಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಬಿಜೆಪಿ, ಎಐಎಡಿಎಂಕೆ ಕೆಂಡಾಮಂಡಲ
ಈ ಘಟನೆಯನ್ನು ಖಂಡಿಸಿರುವ ತಮಿಳುನಾಡು ಬಿಜೆಪಿ ಘಟಕ, ಇದೊಂದು “ಘೋರ ಅವಮಾನ” ಎಂದು ಜರಿದಿದೆ. “ಅರೆಬೆತ್ತಲೆ ಉಡುಪಿನಲ್ಲಿರುವ ಮಹಿಳೆಯರನ್ನು ಹತ್ತಿರಕ್ಕೆ ಕರೆದು ನೃತ್ಯ ಮಾಡಿಸುವ ಮತ್ತು ಅದನ್ನು ನೋಡಿ ಆನಂದಿಸುವ ನಾಯಕರಿಂದ ತಮಿಳುನಾಡಿನ ಮಹಿಳೆಯರು ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೇ?” ಎಂದು ಬಿಜೆಪಿ ತನ್ನ ಎಕ್ಸ್ (X) ಖಾತೆಯಲ್ಲಿ ಪ್ರಶ್ನಿಸಿದೆ.
ವಿರೋಧ ಪಕ್ಷವಾದ ಎಐಎಡಿಎಂಕೆ ನಾಯಕ ಪಶುಪತಿ ಸೆಂಥಿಲ್ ಅವರು ಪ್ರತಿಕ್ರಿಯಿಸಿ, “ಸಚಿವ ಪೆರಿಯಕರುಪ್ಪನ್ ಅವರ ಹಿಂದಿನ ಇತಿಹಾಸ ಗೊತ್ತಿಲ್ಲದವರಿಗೆ ಇದು ಆಶ್ಚರ್ಯವಾಗಬಹುದು. ಆದರೆ, ಇದು ಹಗಲಿನಲ್ಲಿ ನಡೆದಿದ್ದೇ ಪುಣ್ಯ. ಇಲ್ಲದಿದ್ದರೆ ಇನ್ನೇನಾಗುತ್ತಿತ್ತೋ ಊಹಿಸಲೂ ಅಸಾಧ್ಯ” ಎಂದು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಈ ವಿಡಿಯೋಗೆ ನೆಟ್ಟಿಗರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. “ಇದೇನಾ ಡಿಎಂಕೆಯ ಸ್ತ್ರೀವಾದ ಮತ್ತು ಘನತೆ?” ಎಂದು ಕೆಲವರು ಪ್ರಶ್ನಿಸಿದರೆ, ಮತ್ತೆ ಕೆಲವರು “ಇದು ತಮಿಳು ಸಂಸ್ಕೃತಿಗೆ ಮಾಡುತ್ತಿರುವ ಅಪಮಾನ” ಎಂದು ಕಿಡಿಕಾರಿದ್ದಾರೆ. ಸದ್ಯ ಡಿಎಂಕೆ ನಾಯಕತ್ವದಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲವಾದರೂ, ಉಪಮುಖ್ಯಮಂತ್ರಿಯ ಹೆಸರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂತಹ ಅಶ್ಲೀಲತೆ ಪ್ರದರ್ಶನ ಮತ್ತು ಅದಕ್ಕೆ ಸಚಿವರ ಪ್ರೋತ್ಸಾಹ ಮುಜುಗರ ಉಂಟುಮಾಡಿದೆ.
ಇದನ್ನೂ ಓದಿ; ಚಿರತೆಗೆಂದು ಹಾಕಿದ ಬೋನಿನಲ್ಲಿ ಲಾಕ್ ಆದ ಕುಡುಕ! : ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆ



















