ಮಂಗಳೂರು: ದೇಶದ ವಿವಿಧೆಡೆಯ ಉದ್ಯಮಿಗಳಿಗೆ ನೂರಾರು ಕೋ.ರೂ. ವಂಚನೆ ಮಾಡಿರುವ ಪ್ರಕರಣದಲ್ಲಿ ಬಂಧಿತನಾದ ಆರೋಪಿ ರೋಶನ್ ಸಲ್ದಾನಾ ವಿರುದ್ಧದ ಎರಡು ಪ್ರಕರಣಗಳಲ್ಲಿ ಪೊಲೀಸ್ ವಿಚಾರಣೆ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಬಿಹಾರದ ಉದ್ಯಮಿಗೆ 10 ಕೋಟಿ ರೂ. ವಂಚನೆ ಹಾಗೂ ಮಂಗಳೂರಿನ ವ್ಯಕ್ತಿಗೆ 1.5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ವಿಚಾರಣೆ ನಡೆಸದಂತೆ ಹೈಕೋರ್ಟ್ ಸೂಚನೆ ನೀಡಿದೆ. ಇದಕ್ಕೂ ಮೊದಲು ಜು. 23ರಂದು ಆತನನ್ನು ಹೆಚ್ಚಿನ ವಿಚಾರಣೆಗೆಗಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು.
ಮಂಗಳೂರಿನ ಸೆನ್ ಪೊಲೀಸರು ಜು. 17ರಂದು ಆತನ ಮನೆಗೆ ದಾಳಿ ಮಾಡಿ ಬಂಧಿಸಿದ್ದರು. ನಂತರ ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಬಂಧನದ ವಿಚಾರ ತಿಳಿಯುತ್ತಿದ್ದಂತೆ ಹಲವು ಮಂದಿ ಉದ್ಯಮಿಗಳು ತಮಗಾದ ವಂಚನೆಗೆ ಸಂಬಂಧಿಸಿದಂತೆ ದೂರು ನೀಡಲು ಮುಂದೆ ಬಂದಿದ್ದರು. ಮಹಾರಾಷ್ಟ್ರದ ಉದ್ಯಮಿಗೆ 5 ಕೋ ರೂ. ಮತ್ತು ಅಸ್ಸಾಂ ಮೂಲದ ವ್ಯಕ್ತಿಗೆ 20 ಕೋ.ರೂ. ವಂಚಿಸಿದ ಪ್ರಕರಣ ದಾಖಲಾಗಿತ್ತು.
ಹೈದರಾಬಾದ್ ಮೂಲದ ವ್ಯಕ್ತಿ 1 ಕೋ.ರೂ. ವಂಚನೆಯ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಉದ್ದೇಶಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಅರ್ಜಿ ಸಲ್ಲಿಸಿದ್ದರು.
ಈ ಮಧ್ಯೆ ಆತನ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ ಜಾಮೀನು ಸಿಕ್ಕಿರಲಿಲ್ಲ. ಪ್ರಸ್ತುತ ಆರೋಪಿ ರೋಶನ್ ಸಲ್ದಾನ್ಹಾ ಪೊಲೀಸರ ಕಸ್ಟಡಿಯಲ್ಲಿದ್ದಾನೆ. ಎರಡು ಪ್ರಕರಣಗಳಲ್ಲಿ ತಡೆಯಾಗಿದ್ದರೂ ಉಳಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ಪ್ರಗತಿಯಲ್ಲಿದೆ.