ಐಪಿಎಲ್ 18ನೇ ಆವೃತ್ತಿ ಆರಂಭವಾಗಿದ್ದು, ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಬೇಡದ ದಾಖಲೆಗೆ ರೋಹಿತ್ ಶರ್ಮಾ ಸಾಕ್ಷಿಯಾಗಿದ್ದಾರೆ.
ಟಾಸ್ ಗೆದ್ದಿದ್ದ ಚೆನ್ನೈ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ಆರಂಭಿಕ ಆಘಾತ ಎದುರಿಸಿತು. ರೋಹಿತ್ ಶರ್ಮಾ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ತಮ್ಮ ಖಾತೆಗೆ ಬೇಡವಾದ ದಾಖಲೆ ಬರೆದರು.
ರೋಹಿತ್ ಶರ್ಮಾ, ಖಲೀಲ್ ಅಹ್ಮದ್ ಅವರ ಬೌಲಿಂಗ್‌ನಲ್ಲಿ ಶಿವಂ ದುಬೆಗೆ ಕ್ಯಾಚ್ ನೀಡಿದರು. ಈ ಮೂಲಕ ರೋಹಿತ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಜಂಟಿ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ 18 ಬಾರಿ ಖಾತೆ ತೆರೆಯದೆಯೇ ಔಟ್ ಆಗಿರುವ ರೋಹಿತ್ ಶರ್ಮಾ, ಈ ದಾಖಲೆಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಸರಿಗಟ್ಟಿದ್ದಾರೆ. ಈ ಮೂಲಕ ಕೆಟ್ಟ ದಾಖಲೆಗೆ ಕೈ ಹಾಕಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ.