ನವದೆಹಲಿ: ಭಾರತೀಯ ಕ್ರಿಕೆಟ್‌ನಲ್ಲಿ ಸದ್ಯ ಬಿಸಿಬಿಸಿ ಚರ್ಚೆಯಾಗುತ್ತಿರುವ ವಿಷಯವೆಂದರೆ, 2027ರ ಏಕದಿನ ವಿಶ್ವಕಪ್‌ಗೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ಪರಿಗಣಿಸಬೇಕೇ ಅಥವಾ ಬೇಡವೇ ಎಂಬುದು. ಈ ಚರ್ಚೆಗೆ ಇದೀಗ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಧ್ವನಿಗೂಡಿಸಿದ್ದು, ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಕೋಚ್ ಗೌತಮ್ ಗಂಭೀರ್ ಅವರಿಗೆ ಮಹತ್ವದ ಸಂದೇಶ ರವಾನಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ, “ಆಟಗಾರರ ಆಯ್ಕೆಗೆ ವಯಸ್ಸು ಎಂದಿಗೂ ಮಾನದಂಡವಾಗಬಾರದು. ಅವರು ಫಿಟ್ ಆಗಿದ್ದಾರೆಯೇ ಮತ್ತು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆಯೇ ಎಂಬುದಷ್ಟೇ ಮುಖ್ಯವಾಗಬೇಕು,” ಎಂದು ಸ್ಪಷ್ಟಪಡಿಸಿದ್ದಾರೆ.
“ವಯಸ್ಸು ಕೇವಲ ಸಂಖ್ಯೆ, ಫಿಟ್ನೆಸ್ ಮುಖ್ಯ”
ರೋಹಿತ್ ಮತ್ತು ಕೊಹ್ಲಿ ಸದ್ಯ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. 2027ರ ವೇಳೆಗೆ ಅವರಿಗೆ ವಯಸ್ಸಾಗಿರುತ್ತದೆ ಎಂಬ ಕಾರಣಕ್ಕೆ ಅವರನ್ನು ತಂಡದಿಂದ ಕೈಬಿಡಬಾರದು ಎಂಬುದು ಧೋನಿ ಅಭಿಪ್ರಾಯ.
“ನನ್ನ ಪ್ರಕಾರ ವಯಸ್ಸು ಒಂದು ಮಾನದಂಡವೇ ಅಲ್ಲ. ಪ್ರದರ್ಶನ ಮತ್ತು ಫಿಟ್ನೆಸ್ ಮಾತ್ರ ಮಾನದಂಡವಾಗಬೇಕು. ನಾನು 24 ವರ್ಷದವನಿದ್ದಾಗ ತಂಡಕ್ಕೆ ಬಂದೆ, ಆಗ ಯಾರೂ ನನಗೆ ವಯಸ್ಸಿನ ಬಗ್ಗೆ ಹೇಳಲಿಲ್ಲ. ಈಗ ನಾನು 10-20 ವರ್ಷ ಆಡಿದ ಮೇಲೂ ಯಾರೂ ಬಂದು ವಯಸ್ಸಾಗಿದೆ ಎಂದು ಹೇಳಬೇಕಿಲ್ಲ. ನಿಯಮ ಎಲ್ಲರಿಗೂ ಒಂದೇ ಆಗಿರಲಿ. ಆಟಗಾರ ಫಿಟ್ ಆಗಿದ್ದರೆ ಮತ್ತು ರನ್ ಗಳಿಸುತ್ತಿದ್ದರೆ, ಆತ ಆಡಲೇಬೇಕು. ಫಿಟ್ ಇಲ್ಲದಿದ್ದರೆ ಆತ ಎಷ್ಟೇ ದೊಡ್ಡ ಆಟಗಾರನಾದರೂ ತಂಡದಿಂದ ಕೈಬಿಡಬಹುದು,” ಎಂದು ಧೋನಿ ಖಡಕ್ ಆಗಿ ಹೇಳಿದ್ದಾರೆ.
ಅನುಭವಕ್ಕೆ ಬೆಲೆ ಕಟ್ಟಲಾಗದು
ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಕೇವಲ ಯುವಕರ ಪಡೆಯನ್ನು ಕಟ್ಟಿಕೊಂಡು ಹೋದರೆ ಗೆಲ್ಲುವುದು ಕಷ್ಟ. ಅಲ್ಲಿ ಒತ್ತಡ ನಿಭಾಯಿಸಲು ಅನುಭವಿಗಳ ಅಗತ್ಯವಿದೆ ಎಂದು ಧೋನಿ ಪ್ರತಿಪಾದಿಸಿದ್ದಾರೆ.
“ಹೃದಯದ ಬಡಿತವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ, ಭಾವನೆಗಳನ್ನು ನಿಯಂತ್ರಿಸುವುದು ಹೇಗೆ ಮತ್ತು ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬುದು 80-85 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರರಿಗೆ ಮಾತ್ರ ಚೆನ್ನಾಗಿ ಗೊತ್ತಿರುತ್ತದೆ. ತಂಡದಲ್ಲಿ ಯುವಕರು ಮತ್ತು ಅನುಭವಿಗಳ ನಡುವೆ ಸರಿಯಾದ ಸಮತೋಲನವಿರಬೇಕು,” ಎಂದು ಅವರು ಸಲಹೆ ನೀಡಿದ್ದಾರೆ.
ಕೊಹ್ಲಿ ಫಾರ್ಮ್ ಧೋನಿ ಮಾತಿಗೆ ಪುಷ್ಟಿ
ಇತ್ತೀಚೆಗೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ವಿರಾಟ್ ಕೊಹ್ಲಿ ಪ್ರದರ್ಶಿಸಿದ ಆಟ ಧೋನಿ ಅವರ ಮಾತಿಗೆ ಸಾಕ್ಷಿಯಾಗಿದೆ. ಕೊಹ್ಲಿ ಇತ್ತೀಚಿನ ಸರಣಿಗಳಲ್ಲಿ 3 ಶತಕ ಮತ್ತು 2 ಅರ್ಧಶತಕ ಸಿಡಿಸಿ ತಮ್ಮ ಹಳೆಯ ಖದರ್ ತೋರಿಸಿದ್ದಾರೆ. ಹೀಗಾಗಿ, ಕೇವಲ ವಯಸ್ಸಿನ ಕಾರಣಕ್ಕೆ ಇಂತಹ ದಿಗ್ಗಜರನ್ನು 2027ರ ವಿಶ್ವಕಪ್‌ನಿಂದ ದೂರವಿಡುವುದು ಸರಿಯಲ್ಲ ಎಂಬುದು ಧೋನಿ ಅವರ ಬಲವಾದ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ, “ನೀವು ಆಡುತ್ತಿದ್ದೀರಾ? ನೀವು ಫಿಟ್ ಆಗಿದ್ದೀರಾ? ಹಾಗಾದರೆ ಆಟ ಮುಂದುವರಿಸಿ” ಎಂಬ ಸರಳ ಸೂತ್ರವನ್ನು ಧೋನಿ ಆಯ್ಕೆಗಾರರ ಮುಂದಿಟ್ಟಿದ್ದಾರೆ.
ಇದನ್ನೂ ಓದಿ : ಕರ್ನಾಟಕ ವಿರುದ್ಧದ ಕದನಕ್ಕೂ ಮುನ್ನ ಮುಂಬೈ ತಂಡಕ್ಕೆ ‘ಕ್ರಿಕೆಟ್ ದೇವರ’ ಪಾಠ!



















