ಸಿಡ್ನಿ: ರೋಹಿತ್ ಶರ್ಮ(121) ಅವರ ಸೊಗಸಾದ ಶತಕ ಮತ್ತು ವಿರಾಟ್ ಕೊಹ್ಲಿ(74)ಯ ಆಕರ್ಷಕ ಅರ್ಧಶತಕದ ನೆರವಿನಿಂದ ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ಧ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ 9 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ವೈಟ್‌ವಾಶ್ ಮುಖಭಂಗದಿಂದ ಪಾರಾಗಿದೆ.
ಶುಭಮನ್ ಗಿಲ್ ನಾಯಕನಾಗಿ ಗೆಲುವಿನ ಶುಭಾರಂಭ ಕಂಡರು. ಇನ್ನು ಮುಂದಿನ 2 ವರ್ಷ ಭಾರತಕ್ಕೆ ಆಸೀಸ್ ನೆಲದಲ್ಲಿ ಸರಣಿಯಿಲ್ಲ. ಹೀಗಾಗಿ, ನಿವೃತ್ತಿ ಅಂಚಿನಲ್ಲಿರುವ ಕೊಹ್ಲಿ, ರೋಹಿತ್ ತಮ್ಮ ಕೊನೆ ಆಸೀಸ್ ಸರಣಿಯನ್ನು ಶತಕಗಳ ಮೂಲಕ ಸ್ಮರಣೀಯವಾಗಿಸಿದರು.
ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾದ ಎಲ್ಲ ಲೆಕ್ಕಾಚಾರವನ್ನು ಭಾರತೀಯ ಬೌಲರ್‌ಗಳು ಸಂಘಟಿತ ದಾಳಿ ಮೂಲಕ ಬುಡಮೇಲು ಮಾಡಿದರು.
ಆಸೀಸ್ 46.4 ಓವರ್‌ಗಳಲ್ಲಿ 236 ರನ್‌ಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಭಾರತ ಯಾವುದೇ ಆಘಾತಕ್ಕೊಳಗಾಗದೆ 38.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 237 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಈ ಮೂಲಕ ಆಸೀಸ್‌ನ ಚೊಚ್ಚಲ ಕ್ಲೀನ್ ಸ್ವೀಪ್ ಯೋಜನೆಯನ್ನು ವಿಫಲಗೊಳಿಸಿತು. ಭಾರತ ವಿರುದ್ಧ ಆಸೀಸ್ 4 ದಶಕಗಳಿಂದ ದ್ವಿಪಕ್ಷೀಯ ಏಕದಿನ ಸರಣಿ ಆಡುತ್ತಿದೆ. ಆದರೆ ಒಮ್ಮೆಯೂ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಕ್ಲೀನ್‌ಸ್ವೀಪ್ ಮಾಡಿಲ್ಲ.



















