ದಾವಣಗೆರೆ: ಫಸಲು ಬಂದಿದ್ದ ಸುಮಾರು 7.50 ಲಕ್ಷ ರೂ. ಮೌಲ್ಯದ ದಾಳಿಂಬೆಯನ್ನು ಖದೀಮರು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
2 ಎಕರೆಯಲ್ಲಿ ಬೆಳೆದ ಸುಮಾರು 7 ಟನ್ ಗೂ ಅಧಿಕ ದಾಳಿಂಬೆಯನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಿರೇಮಲ್ಲನಹೊಳೆಯಲ್ಲಿ ಈ ಘಟನೆ ನಡೆದಿದೆ.
ಹತ್ತು ಲಕ್ಷ ರೂ. ಗೂ ಅಧಿಕ ಬಂಡವಾಳ ಹೂಡಿ ರೈತ ರವಿಕುಮಾರ್ ದಾಳಿಂಬೆ ಬೆಳೆದಿದ್ದರು. 750 ದಾಳಿಂಬೆ ಗಿಡಗಳ ಪೈಕಿ 500 ಗಿಡಗಳಲ್ಲಿನ ದಾಳಿಂಬೆ ಕಟಾವು ಮಾಡಿ ಖದೀಮರು ದೋಚಿ ಪರಾರಿಯಾಗಿದ್ದಾರೆ. ಕಷ್ಟಪಟ್ಟು ಬೆಳೆದ ದಾಳಿಂಬೆ ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ರೈತ ಕಂಗಾಲಾಗಿದ್ದಾರೆ. ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



















